ADVERTISEMENT

ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 20:06 IST
Last Updated 31 ಮಾರ್ಚ್ 2019, 20:06 IST
ಬಿ.ಸುರೇಶ್‌ಗೌಡ
ಬಿ.ಸುರೇಶ್‌ಗೌಡ   

ತುಮಕೂರು: ತಾಲ್ಲೂಕಿನ ಹೊನಸಿಗೆರೆ ಗ್ರಾಮದಲ್ಲಿ ಈಚೆಗೆ ಚುನಾವಣಾ ಸಭೆಯಲ್ಲಿ ಮಾಜಿ ಶಾಸಕ ಬಿ.ಸುರೇಶ್‌ಗೌಡ ಪ್ರಚೋದನಕಾರಿ ಭಾಷಣ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಶಾಸಕ ಡಿ.ಸಿ.ಗೌರಿಶಂಕರ್ ನೀಡಿದದೂರಿನ ಮೇರೆಗೆ ಚುನಾವಣಾ ವಿಚಕ್ಷಣಾ ಅಧಿಕಾರಿ, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುರೇಶ್‌ಗೌಡ ಅವರ ಪ್ರಚೋದನಕಾರಿ ಭಾಷಣದ ವಿಡಿಯೊ ದಾಖಲೆಯನ್ನು ಗೌರಿಶಂಕರ್ ದೂರಿನ ಜತೆ ನೀಡಿದ್ದಾರೆ. ಅದನ್ನು ಪರಿಶೀಲಿಸಿ ಈ ದೂರು ನೀಡಿದ್ದು, ಕ್ರಮ ಜರುಗಿಸಬೇಕು ಎಂದು ಚುನಾವಣಾ ವಿಚಕ್ಷಣಾಧಿಕಾರಿ ಡಿ.ಜಯರಾಮಣ್ಣ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ಹಿನ್ನೆಲೆ: ಹೊನಸಿಗೆರೆ ಸಭೆಯಲ್ಲಿ ಸುರೇಶ್ ಗೌಡ ಅವರು ಜೆಡಿಎಸ್‌ನವರು ಬಂದರೆ ಉರೊಳಗಡೆ ಬಿಡಬೇಡಿ. ಶಾಸಕ ಗೌರಿಶಂಕರ್ ಬಂದರೆ ಕೆರೆಗೆ ನೀರು ಬಿಡಿಸದ ಶಾಸಕ, ಕಳ್ಳ ಕಳ್ಳ ಎಂದು ಕಿರುಚಿ. ದೊಣ್ಣೆ ಹಿಡಿದು ನಿಂತ್ಕೊಂಡು ಎಲೆಕ್ಷನ್ ಮಾಡಿ. ಕುರುಕ್ಷೇತ್ರದಲ್ಲಿ ಪಾಂಡವರೊಂದಿಗೆ ಶ್ರೀಕೃಷ್ಣ ಪರಮಾತ್ಮ ಇದ್ದ ಹಾಗೆ ನಾನು ನಿಮ್ಮ ಹಿಂದೆ ಇರ್ತೇನೆ ಎಂದು ಹೇಳಿದ್ದರು.

ADVERTISEMENT

ಶಾಸಕ ಗೌರಿಶಂಕರ್ ದುಡ್ಡು ಕೊಟ್ಟರೆ ತೆಗೆದುಕೊಂಡು ಮಜಾ ಮಾಡಿ. ಅವನೇನೂ ಮನೆಯ ದುಡ್ಡು ಕೊಡಲ್ಲ. ನಮ್ಮ ದುಡ್ಡೇ ನಮಗೆ ಕೊಡ್ತಾನೆ. ಹಣ ತೆಗೆದುಕೊಳ್ಳಿ ಓಟ್ ಬಿಜೆಪಿಗೆ ಹಾಕ್ಸಿ ಎಂದು ಹೇಳಿದ್ದರು. ಅವರ ಈ ಭಾಷಣದ ವಿಡಿಯೊ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಅದೇ ದಿನ ಮಧ್ಯಾಹ್ನ ಶಾಸಕ ಡಿ.ಸಿ. ಗೌರಿಶಂಕರ್ ಅವರು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ಅವರಿಗೆ ದೂರು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.