ADVERTISEMENT

ಶಾಸಕ ಹರೀಶ್‌ ಪೂಂಜಾ ವಿರುದ್ಧದ ಪ್ರಕರಣ: ಭಾಷಣದ ಸಿಡಿ ಒದಗಿಸಲು ಹೈಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2023, 0:30 IST
Last Updated 19 ನವೆಂಬರ್ 2023, 0:30 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಮತ್ತು ಕೋಮು ಭಾವನೆ ಕೆರಳಿಸುವ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾದ ಕ್ರಿಮಿನಲ್‌ ಪ್ರಕರಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉಲ್ಲೇಖಿಸಿರುವ ಹೇಳಿಕೆಯ ವಿಡಿಯೊದ ಸಿಡಿಯನ್ನು ಒದಗಿಸಿ‘ ಎಂದು ಪ್ರಕರಣದ‌ ಫಿರ್ಯಾದುದಾರರಿಗೆ ಹೈಕೋರ್ಟ್ ಸೂಚಿಸಿದೆ.

‘ಬೆಳ್ತಂಗಡಿ ಠಾಣಾ ಪೊಲೀಸರು ನನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಪಡಿಸಬೇಕು‘ ಎಂದು ಕೋರಿ ಹರೀಶ್ ಪೂಂಜಾ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ADVERTISEMENT

ಇದೇ ವೇಳೆ ಫಿರ್ಯಾದುದಾರರ ಪರ ವಕೀಲ ಬಿ.ಲತೀಫ್‌, ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಸಮಯಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಿದೆ.

ಪ್ರಕರಣವೇನು?: 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಹರೀಶ್ ಪೂಂಜಾ ಅವರಿಗೆ ಬೆಳ್ತಂಗಡಿಯ ಕಿನ್ಯಮ್ಮ ಸಭಾಭವನ ಜೈನ್ ಪಟೇಲ್ ಸಭಾಂಗಣದಲ್ಲಿ 2023ರ ಮೇ 22ರಂದು ಬಿಜೆಪಿ ವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹರೀಶ್ ಪೂಂಜಾ, ‘ಕೋಮು ಪ್ರಚೋದಕ ಮತ್ತು ಸಂವಿಧಾನ ಬಾಹಿರ ಹೇಳಿಕೆ ನೀಡಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ದ್ವೇಷ ಉಂಟು ಮಾಡಬೇಕು ಹಾಗೂ ಶಾಂತಿ ಕದಡಬೇಕು ಎಂಬ ಉದ್ದೇಶದಿಂದ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ‘ ಎಂದು ಆರೋಪಿಸಿ ನಮಿತಾ ಕೆ.ಪೂಜಾರಿ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.  ಇದರನ್ವಯ ಪೊಲೀಸರು, ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 153, 153 (ಎ) 505 ಮತ್ತು 505 (ಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.