ADVERTISEMENT

ಕಾನೂನು ತಜ್ಞರ ಸಲಹೆ ಕೋರಿದ ಪೊಲೀಸರು

ಕಲ್ಲಡ್ಕ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸ ಅಣಕು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 19:30 IST
Last Updated 13 ಜನವರಿ 2020, 19:30 IST

ಮಂಗಳೂರು: ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಡಿಸೆಂಬರ್‌ 15ರಂದು ನಡೆದ ಕ್ರೀಡೋತ್ಸವದಲ್ಲಿ ಬಾಬರಿ ಮಸೀದಿ ಧ್ವಂಸ ಘಟನೆಯ ಅಣಕು ಪ್ರಹಸನ ಪ್ರದರ್ಶಿಸಿರುವುದರ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯಲ್ಲಿ ಮುಂದಿನ ಹೆಜ್ಜೆ ಕುರಿತು ಪೊಲೀಸರು ಕಾನೂನು ತಜ್ಞರ ಸಲಹೆ ಕೋರಿದ್ದಾರೆ.

ಡಿ.15ರಂದು ನಡೆದ ಸಮಾರಂಭದಲ್ಲಿ ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ಎಸ್‌ಪಿ ಬಿ.ಎಂ. ಲಕ್ಷ್ಮೀಪ್ರಸಾದ್‌ ಅವರ ಉಪಸ್ಥಿತಿಯಲ್ಲೇ ಅಲ್ಲಿನ ವಿದ್ಯಾರ್ಥಿಗಳು 15 ನಿಮಿಷಗಳ ಪ್ರಹಸನ ಪ್ರದರ್ಶಿಸಿದ್ದರು. ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಘಟನೆ ಮತ್ತು ರಾಮ ಮಂದಿರ ನಿರ್ಮಾಣದ ಕಾರ್ಯವನ್ನೂ ಅದರಲ್ಲಿ ಮಕ್ಕಳು ಪ್ರದರ್ಶಿಸಿದ್ದರು.

ಅಬೂಬಕ್ಕರ್‌ ಸಿದ್ದೀಕ್ ಎಂಬುವವರು ನೀಡಿರುವ ದೂರನ್ನು ಆಧರಿಸಿ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಶ್ರೀರಾಮ ವಿದ್ಯಾ ಕೇಂದ್ರದ ಮುಖ್ಯಸ್ಥರೂ ಆಗಿರುವ ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತ ವಿಭಾಗ ಪ್ರಮುಖ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಪ್ರಹಸನದಲ್ಲಿ ಅಭಿನಯಿಸಿರುವವರೆಲ್ಲರೂ ಮಕ್ಕಳಾಗಿರುವ ಕಾರಣದಿಂದ ತನಿಖೆಯಲ್ಲಿ ಮುಂದೇನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸ್‌ಪಿ ಬಿ.ಎಂ. ಲಕ್ಷ್ಮೀಪ್ರಸಾದ್‌, ‘ಈ ಪ್ರಕರಣದಲ್ಲಿ ಪ್ರಭಾಕರ ಭಟ್‌ ಮೊದಲ ಆರೋಪಿಯಾಗಿದ್ದಾರೆ. ಆದರೆ, ಪ್ರಹಸನದಲ್ಲಿ ಅಭಿನಯಿಸಿರುವ ಎಲ್ಲರೂ ವಿದ್ಯಾರ್ಥಿಗಳು. ಅವರ ವಿಚಾರದಲ್ಲಿ ಏನು ಮಾಡಬೇಕು ಎಂಬ ಗೊಂದಲವಿದೆ. ಈ ಕುರಿತು ಅಭಿಪ್ರಾಯ ಕೋರಿ ಕಾನೂನು ತಜ್ಞರಿಗೆ ಪತ್ರೆ ಬರೆಯಲಾಗಿದೆ’ ಎಂದರು.

ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಅಗತ್ಯ ಕಂಡುಬಂದಲ್ಲಿ ಪ್ರಭಾಕರ ಭಟ್‌ ಅವರನ್ನೂ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.