ADVERTISEMENT

ರಮೇಶ್‌ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ: ಎಚ್.ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 9:01 IST
Last Updated 10 ಮಾರ್ಚ್ 2020, 9:01 IST
ಎಚ್‌.ವಿಶ್ವನಾಥ
ಎಚ್‌.ವಿಶ್ವನಾಥ   

ಮೈಸೂರು: ಧರ್ಮಗಳ ನಡುವೆ ಸಂಘರ್ಷ ಹುಟ್ಟು ಹಾಕುವಂತಹ ಹೇಳಿಕೆ ನೀಡಿರುವ ಶಾಸಕ ಕೆ.ಆರ್.ರಮೇಶ್‌ಕುಮಾರ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಮುಖಂಡ ಅಡಗೂರು ಎಚ್.ವಿಶ್ವನಾಥ್ ಒತ್ತಾಯಿಸಿದರು.

ಕೇವಲ ರಮೇಶ್‌ಕುಮಾರ್ ಮಾತ್ರವಲ್ಲ, ಸಂವಿಧಾನ ಬಾಹಿರವಾಗಿ ಮಾತನಾಡುವ ಎಲ್ಲರ ಮೇಲೂ ಪಕ್ಷಾತೀತವಾಗಿ ಪ್ರಕರಣ ದಾಖಲಿಸಬೇಕು ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಮುಸ್ಲಿಮರೆಲ್ಲ ಒಂದಾಗಿ ಪ್ರಧಾನಮಂತ್ರಿ ಅವರನ್ನು ಒದ್ದು ದೇಶದ ಹೊರಗೆ ಹಾಕಿ ಎಂದು ಸ್ಪೀಕರ್ ಆಗಿದ್ದ ರಮೇಶ್‌ಕುಮಾರ್ ಹೇಳಿದ್ದಾರೆ. ಇವರೊಬ್ಬ ಮಾನಸಿಕ ಅಸ್ವಸ್ಥ. ‘ಯಶಸ್ವಿನಿ’ಯನ್ನು ತೆಗೆದು ಹಾಕುವ ಮೂಲಕ ಗ್ರಾಮೀಣ ಜನರ ಆರೋಗ್ಯವನ್ನು ಕಿತ್ತುಕೊಂಡವರು. ಮೊದಲು ಇವರನ್ನು ಒದ್ದು ಜೈಲಿಗೆ ಹಾಕಬೇಕು’ ಎಂದು ಕಿಡಿಕಾರಿದರು.

ADVERTISEMENT

‘ಶಾದಿಭಾಗ್ಯ’ ಬೇಕು ಎಂದು ನಾನೂ ಒತ್ತಾಯಿಸುತ್ತೇನೆ. ಆದರೆ, ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಮುಸ್ಲಿಮರ ಪರವಾಗಿ ಬೂಟಾಟಿಕೆ ಮಾತುಗಳನ್ನಾಡುತ್ತಿದ್ದಾರೆ. ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಅಧ್ಯಕ್ಷ ಸ್ಥಾನ, ಕಾರ್ಯಾಧ್ಯಕ್ಷ ಅಥವಾ ಅಧ್ಯಕ್ಷ ಸ್ಥಾನಗಳಲ್ಲಿ ಒಂದಾದರೂ ಮುಸ್ಲಿಮರಿಗೆ ನೀಡುವಂತೆ ಸಿದ್ದರಾಮಯ್ಯ ಪ್ರತಿಪಾದಿಸಲಿ’ ಎಂದು ಸವಾಲೆಸೆದರು.

ರೋಷನ್‌ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡುವ ಮೂಲಕ ಮುಸ್ಲಿಂ ನಾಯಕತ್ವವನ್ನೇ ಸಿದ್ದರಾಮಯ್ಯ ಕೊಂದು ಹಾಕಿದರು ಎಂದು ಟೀಕಿಸಿದರು.

‘ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳುವ ಎಚ್.ಡಿ.ದೇವೇಗೌಡ, ತಮ್ಮ ಪಕ್ಷದ ಅಧ್ಯಕ್ಷ ಸ್ಥಾನವನ್ನು ಮುಸ್ಲಿಮರಿಗೆ ನೀಡಲಿ. ಅದನ್ನು ಬಿಟ್ಟು ಮುಸ್ಲಿಮರ ಕೇರಿಗೆ ಹೋಗಿ ಕಣ್ಣೀರು ಹಾಕುವುದನ್ನು ಅವರು ಬಿಡಬೇಕು’ ಎಂದರು.

‘ಶ್ರೀರಾಮುಲು ದುಬಾರಿ ಮದುವೆ ಮಾಡುತ್ತಿರುವುದು ಹಾಗೂ ಎಚ್.ಡಿ.ಕುಮಾರಸ್ವಾಮಿ ಪಕ್ಷ ಸಂಘಟನೆಗೆ, ಜನರ ಋಣ ತೀರಿಸಲು ದುಬಾರಿ ಮದುವೆ ಮಾಡುತ್ತಿರುವುದು ಸರಿಯಲ್ಲ. ಶಾಸಕ ಜಿ.ಟಿ.ದೇವೇಗೌಡ, ನಾನು, ಕಾಂಗ್ರೆಸ್ ಮುಖಂಡ ಆಂಜನೇಯ ತಮ್ಮ ತಮ್ಮ ಮಕ್ಕಳ ಮದುವೆಗಳನ್ನು ಸರಳವಾಗಿ ನೆರವೇರಿಸಿ ಆದರ್ಶ ಮೆರೆದಿದ್ದೇವೆ’ ಎಂದು ಪ್ರತಿಪಾದಿಸಿದರು.

ಮದುವೆಯಲ್ಲಿ ಊಟ, ಬಟ್ಟೆ ನೀಡಿದರೆ ಜನರ ಋಣ ತೀರಿಸಿದಂತೆ ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಎಚ್.ಎಸ್.ದೊರೆಸ್ವಾಮಿ ಅವರು ಒಂದು ಪಕ್ಷದ ಪರವಾಗಿ ಮಾತನಾಡಬಾರದು. ಹಾಗೆಯೇ, ಬಸವನಗೌಡ ಯತ್ನಾಳ್ ಸಹ ದೊರೆಸ್ವಾಮಿ ಕುರಿತು ಗೌರವಯುತವಾಗಿ ಮಾತನಾಡಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.