ADVERTISEMENT

ಸಿಐಡಿಗೆ ವರ್ಗಾವಣೆಗೊಂಡ ಪ್ರಕರಣ: ತನಿಖೆಗೆ 10 ಅಂಶಗಳ ಪಾಲನೆಗೆ ಡಿಜಿಪಿ ಆದೇಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 0:16 IST
Last Updated 20 ಜೂನ್ 2025, 0:16 IST
ಎಂ.ಎ. ಸಲೀಂ
ಎಂ.ಎ. ಸಲೀಂ   

ಬೆಂಗಳೂರು: ಕ್ರಿಮಿನಲ್ ಪ್ರಕರಣಗಳನ್ನು ಸಿಐಡಿಗೆ ತನಿಖೆಗಾಗಿ ವರ್ಗಾಯಿಸಿದಾಗ ಅನುಸರಿಸಬೇಕಾದ ಪ್ರಮುಖ 10 ಅಂಶಗಳನ್ನು ಅಧಿಕಾರಿಗಳು ಪಾಲಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಸಿಐಡಿಯು ಪ್ರಮುಖ ಅಪರಾಧ ತನಿಖಾ ಸಂಸ್ಥೆಯಾಗಿದೆ. ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್‌, ಹೈಕೋರ್ಟ್ ಹಾಗೂ ಡಿಜಿ ಮತ್ತು ಐಜಿಪಿ ಕಚೇರಿಯಿಂದ ಆದೇಶವಾದ ಪರಿಣಾಮವಾಗಿ ಸಿಐಡಿಯ ತನಿಖಾಧಿಕಾರಿಗಳು ತಪ್ಪದೇ ಕೆಲವು ನಿಯಮಗಳನ್ನು ಅನುಸರಿಸಬೇಕಾಗಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ.

ಪಾಲಿಸಬೇಕಾದ ಕಾರ್ಯವಿಧಾನಗಳು:

ADVERTISEMENT

* ತನಿಖೆಯಲ್ಲಿರುವ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದ್ದರ ಬಗ್ಗೆ ಘಟಕದ ಮುಖ್ಯಸ್ಥರಿಗೆ ಮಾಹಿತಿ ನೀಡಿ, ತನಿಖಾಧಿಕಾರಿಗೆ ಸಂಗ್ರಹಿಸಿದ ಸಾಕ್ಷ್ಯಾಧಾರಗಳನ್ನು ಹಾಗೂ ಕಂಡುಕೊಂಡ ಸಂಗತಿಗಳನ್ನು ಕ್ರಮ ಪಟ್ಟಿಗೊಳಿಸಿ ಮೂರು ದಿನದೊಳಗೆ ಸಲ್ಲಿಸಬೇಕು.

* ಮೇಲಾಧಿಕಾರಿಗಳ ಸೂಚನೆ ಹಾಗೂ ಆದೇಶಗಳನ್ನು ಸ್ವೀಕರಿಸಿದ ತಕ್ಷಣ ಪ್ರಕರಣದ ಕೇಸ್ ಡೈರಿಯನ್ನು ಆಯಾ ದಿನಾಂಕದಂದು ಅಪ್‍ಡೇಟ್ ಮಾಡುವುದು ಹಾಗೂ ಐಟಿ ತನಿಖೆಯ ಕ್ರಮಗಳನ್ನು ಪಾಲಿಸಬೇಕು. ಬಾಕಿ ಇರುವ ತನಿಖಾ ಕ್ರಮ ಮತ್ತು ವಿಷಯಗಳನ್ನು ಪಟ್ಟಿ ಮಾಡಬೇಕು.

* ಸ್ಥಳೀಯ ತನಿಖಾಧಿಕಾರಿಗಳು ತನಿಖಾ ಕಡತವನ್ನು ಪರಿವಿಡಿಯೊಂದಿಗೆ ಕ್ರಮಬದ್ಧವಾಗಿ ಪುಟಸಂಖ್ಯೆ ನೀಡಿ ಕಡತ ಸಿದ್ಧಪಡಿಸತಕ್ಕದ್ದು.

*ಹಿಂದಿನ ತನಿಖಾಧಿಕಾರಿ ಹಾಗೂ ತಾನು ಕೈಗೊಂಡ ತನಿಖೆ ಕುರಿತು ಬಾಕಿ ಇರುವ ತನಿಖೆ ಹಂತದ ಕ್ರಮ ಮತ್ತು ವಿಷಯಗಳ ವರದಿ ಸಿದ್ಧಪಡಿಸಿಕೊಂಡು ಸಿಐಡಿ ಕಚೇರಿ ಮುಖ್ಯಸ್ಥರಿಗೆ ಪರಿಶೀಲನೆಗೆ ಸಲ್ಲಿಸಬೇಕು.

*ಕಚೇರಿ ಮುಖ್ಯಸ್ಥರು ಆ ವರದಿಯನ್ನು ಸ್ವೀಕರಿಸಿದ ಎರಡು ದಿನದೊಳಗೆ ಸಿಐಡಿ ಘಟಕದ ಪೊಲೀಸ್‌ ಅಧೀಕ್ಷಕರು ಆಡಳಿತ ಇವರನ್ನು ಸಂಪರ್ಕಿಸಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲು ದಿನಾಂಕವನ್ನು ನಿಗದಿಪಡಿಸುವ ಕುರಿತು ಕೋರಿಕೆ ಸಲ್ಲಿಸಬೇಕು.

* ಪೂರ್ವಭಾವಿ ಸಭೆಯಲ್ಲಿ ಹಾಜರಿರುವ ಸಿಐಡಿ ಪೊಲೀಸ್ ಅಧಿಕಾರಿಗಳಿಗೆ ತನಿಖೆಯಲ್ಲಿ ಕಡ್ಡಾಯವಾಗಿ ಹಾಜರಿರುವುದು ಸೇರಿದಂತೆ ಕಾನೂನು ಪಾಲಿಸದೇ ಇರುವುದು ಕಂಡು ಬಂದಲ್ಲಿ, ನ್ಯಾಯಾಲಯ ತಡೆಯಾಜ್ಞೆ ಆದೇಶವಾಗಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ಕಡ್ಡಾಯ ಕಾನೂನು ಪಾಲಿಸುವವರೆಗೆ ಅಥವಾ ತಡೆಯಾಜ್ಞೆ ರದ್ದಾಗುವವರೆಗೆ ಪ್ರಕರಣ ಸಿಐಡಿಗೆ ಹಸ್ತಾಂತರಿಸಲು ಸೂಚನೆ ನೀಡುವವರೆಗೆ ಹಸ್ತಾಂತರ ಪ್ರಕ್ರಿಯೆಯನ್ನು ಮುಂದೂಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.