ADVERTISEMENT

ಜಾತಿ ಜನಗಣತಿ | ಏನೂ ಗೊತ್ತಿಲ್ಲ ಎಂದು ಸಿಎಂ ಹೇಳಿದರೆ ನಂಬಲು ಮೂರ್ಖರಲ್ಲ: ಅಶೋಕ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
 ಆರ್. ಅಶೋಕ 
 ಆರ್. ಅಶೋಕ    

ಬೆಂಗಳೂರು: ‘ಜಾತಿ ಜನಗಣತಿ ವರದಿಯನ್ನು ಸಿದ್ದರಾಮಯ್ಯ ಅವರೇ ನಿರ್ದೇಶನ ಕೊಟ್ಟು ಬರೆಯಿಸಿದ್ದಾರೆ. ಆದರೆ,  ಅದರಲ್ಲಿ ಏನಿದೆ ಎನ್ನುವುದು ಗೊತ್ತೇ ಇಲ್ಲ ಎಂದು ಅವರು ಹೇಳಿದರೆ, ಅದನ್ನು ನಂಬಲು ನಾವು ರಾಹುಲ್‌ಗಾಂಧಿಯಷ್ಟು ಮೂರ್ಖರಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದ್ದಾರೆ.

‘ಜಾತಿ ಜನಗಣತಿ ವೇಳೆ ಸಮೀಕ್ಷೆ ನಡೆಸುವವರು ಬಹಳಷ್ಟು ಮನೆಗಳಿಗೆ ಬಂದು ಮಾಹಿತಿ ಸಂಗ್ರಹಿಸಿಲ್ಲ ಎನ್ನುವ ದೂರುಗಳ ಆಧಾರದ ಮೇಲೆ ಇಡೀ ಪ್ರಕ್ರಿಯೆ ಅವೈಜ್ಞಾನಿಕ ಎಂದಿದ್ದೇನೆ. ಗಣತಿ ಪ್ರಕ್ರಿಯೆಯೇ ಅಪೂರ್ಣ ಮತ್ತು ಅವೈಜ್ಞಾನಿಕವಾಗಿರುವಾಗ ವರದಿಯಲ್ಲಿನ ಅಂಶಗಳು ಸರಿ ಇರಲು ಸಾಧ್ಯವೆ ಎಂದು ಅವರು’ ಎಕ್ಸ್‌’ನಲ್ಲಿ ಪ್ರಶ್ನಿಸಿದ್ದಾರೆ.

‘ನನ್ನ ಹೇಳಿಕೆಯಿಂದ ನಿರಾಳರಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಸ್ವಪಕ್ಷದ ಹಿತಶತ್ರುಗಳಿಂದ ಕೋರ್ಟ್‌, ಕೇಸು, ತನಿಖೆಗಳಿಂದ ಅವರು ನಿರಾಳತೆ ಮತ್ತು ನೆಮ್ಮದಿ ಕಳೆದುಕೊಂಡು ಅನೇಕ ದಿನಗಳಾಗಿವೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಕಡೇ ಪಕ್ಷ ನನ್ನ ಹೇಳಿಕೆಯಿಂದ ಅವರಿಗೆ ಅಲ್ಪ ನಿರಾಳತೆ ಸಿಕ್ಕಿರುವುದು ಸಂತಸದ ವಿಚಾರವೇ ಆಗಿದೆ’ ಎಂದಿದ್ದಾರೆ.

ADVERTISEMENT

‘ನಿಮ್ಮ ಪಕ್ಷಕ್ಕೆ ದಲಿತರ ಬಗ್ಗೆ ಕಾಳಜಿ ಇದ್ದಿದ್ದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದಿಯಾಗಿ ಇಂಡಿ ಮೈತ್ರಿಕೂಟದ ಅನೇಕ ನಾಯಕರು 2024ರ ಲೋಕಸಭಾ ಚುನಾವಣೆಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಿ ಎಂದಾಗ ನೀವೂ ಸೇರಿದಂತೆ ಯಾವ ಕಾಂಗ್ರೆಸ್‌ ನಾಯಕರೂ ಯಾಕೆ ಅದಕ್ಕೆ ಧ್ವನಿಗೂಡಿಸಲಿಲ್ಲ’ ಎಂದು ಅವರು ‍ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.