ADVERTISEMENT

Caste Census | ಸಮೀಕ್ಷೆ ಅವಧಿ ವಿಸ್ತರಿಸಲು ಹಿಂದುಳಿದ ಜಾತಿಗಳ ಒಕ್ಕೂಟ ಮನವಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 11:28 IST
Last Updated 6 ಅಕ್ಟೋಬರ್ 2025, 11:28 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಭಾಗಗಳಲ್ಲಿ ಶೇ 80ರಷ್ಟು ಪೂರ್ಣಗೊಂಡಿದ್ದು, ಅವಧಿಯನ್ನು ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮನವಿ ಮಾಡಿದೆ.

ADVERTISEMENT

‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಸೆಪ್ಟೆಂಬರ್ 22ರಿಂದ ಆರಂಭಿಸಿದ್ದು, ಅಕ್ಟೋಬರ್‌ 7ಕ್ಕೆ ಮುಗಿಯಲಿದೆ. ಈ ಅವಧಿಯನ್ನು ಮತ್ತಷ್ಟು ಹೆಚ್ಚಿಸಿ, ಆನ್‌ಲೈನ್‌ನಲ್ಲಿ ಮಾಹಿತಿ ನೀಡುವ ಪ್ರಕ್ರಿಯೆ ಇನ್ನೂ ಅಧಿಕ ಸಮಯ ನೀಡಬೇಕು’ ಎಂದು ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಒತ್ತಾಯಿಸಿದರು.

‘ಸಮೀಕ್ಷಾ ಕಾರ್ಯಕ್ಕೆ ವಿರೋಧ ಪಕ್ಷದ ಕೆಲವು ಮುಖಂಡರು ಅದರಲ್ಲೂ ಮೇಲ್ವರ್ಗದ ಜನರು ವಿರೋಧ ಮಾಡುತ್ತಿರುವುದಲ್ಲದೇ, ಜಾತಿಗಣತಿ ಎಂದು ಜನರಲ್ಲಿ ಗೊಂದಲವನ್ನು ಸೃಷ್ಠಿಸುತ್ತಿರುವುದನ್ನು ಒಕ್ಕೂಟ ಖಂಡಿಸುತ್ತದೆ’ ಎಂದರು.

‘ಹಿಂದುಳಿದ ವರ್ಗಗಳ ಆಯೋಗದ ಕಾರ್ಯಗಳಿಗೆ ರಾಜ್ಯ ಸರ್ಕಾರವಾಗಲಿ ಅಥವಾ ಮತ್ಯಾವುದೋ ಅನ್ಯ ಸಂಸ್ಥೆಗಳಾಗಲಿ ಹಸ್ತಕ್ಷೇಪ ಮಾಡಲು, ನಿರ್ದೇಶನ ನೀಡಲು ಅವಕಾಶವಿಲ್ಲ. ಈ ಸಮೀಕ್ಷೆಯು ಹಿಂದುಳಿದ ಜಾತಿಗಳ ಸಮೀಕ್ಷೆಯಾಗಿರದೇ ಇದೊಂದು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವವನ್ನು ಒಳಗೊಂಡಿರುವ ಸಾಮಾಜಿಕ ಕ್ರಾಂತಿಯಾಗಿರುತ್ತದೆ’ ಎಂದು ಹೇಳಿದರು.

‘ಪ್ರತಿಪಕ್ಷಗಳ ಮುಖಂಡರ ವಿರೋಧವು ಮುಂದುವರಿದಲ್ಲಿ ವಿರೋಧ ಮಾಡುವವರ ಮನೆಯ ಮುಂದೆ ಹಿಂದುಳಿದ ಜಾತಿಗಳ ಒಕ್ಕೂಟವು ಧರಣಿಯನ್ನು ಮಾಡಬೇಕಾಗುತ್ತದೆ. ಅಂತವರು ಪ್ರತಿನಿಧಿಸುವ ಪಕ್ಷಗಳನ್ನು ಮುಂದಿನ ದಿನಗಳಲ್ಲಿ ಬಹಿಷ್ಕರಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು

‘ಪ್ರಬಲ ಜಾತಿಗಳು, ಈ ಹಿಂದೆ ರಾಜ್ಯದಲ್ಲಿ ನಡೆದಿರುವ ಇಂತಹ ಹಲವಾರು ವರದಿಗಳನ್ನು ವಿರೋಧಿಸುತ್ತಾ ಬಂದಿರುತ್ತವೆ. 2014-15ರಲ್ಲಿ ಸಮೀಕ್ಷೆ ನಡೆಯುವಾಗಲು ನ್ಯಾಯಾಲಯದ ಮೋರೆ ಹೋಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿರುತ್ತಾರೆ’ ಎಂದರು.

‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 1995ರ ಕಾಯ್ದೆಯ ಅನ್ವಯ ಒಂದು ಶಾಸನ ಬದ್ದ ಸ್ವಯತ್ತ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಮಂಡಲ್ ಅಯೋಗದ ವರದಿ ಜಾರಿ ವಿರುದ್ದ ಇಂದಿರಾ ಸಹಾನಿ v/s ಕೇಂದ್ರ ಸರ್ಕಾರದ ಮೊಕದ್ದಮೆಯ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠವು ಪ್ರತಿಯೊಂದು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆಯಾಗಬೇಕು ಮತ್ತು ಈ ಆಯೋಗವು ಪ್ರತಿ 10 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾಡಿ ಅವರ ಸ್ಥಿತಿಗತಿಗಳನ್ನು ತಿಳಿದುಕೊಂದು ಚಾಲ್ತಿಯಲ್ಲಿರುವ ಮೀಸಲಾತಿಯನ್ನು ಪರಿಶೀಲಿಸಿ, ಪರಿಷ್ಕರಿಸಿ ಅದಕ್ಕೆ ಪೂರಕ ಯೋಜನೆಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಮಾಹಿತಿಯನ್ನು ನೀಡುವುದು ಆಯೋಗದ ಆದ್ಯ ಕರ್ತವ್ಯ ಕಡ್ಡಾಯ ಎಂದು ಆದೇಶವನ್ನು ನೀಡಿರುತ್ತದೆ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್ ವೆಂಕಟರಾಮಯ್ಯ ಮಾಹಿತಿ ನೀಡಿದರು.

‘ಆಯೋಗವು ಈ ಸಮೀಕ್ಷೆ ಮೂಲಕ ರಾಜ್ಯದಲ್ಲಿರುವ ಎಲ್ಲಾ ಧರ್ಮದ, ಎಲ್ಲಾ ಜಾತಿಯವರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಾಯನವನ್ನು ನಡೆಸಿ, ಸರ್ಕಾರವು ಅರ್ಹರಿಗೆ ಅಗತ್ಯ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಓದಗಿಸಲು ಹಾಗೂ ನೀತಿಗಳನ್ನು ರೂಪಿಸಲು ಮಾಹಿತಿಯನ್ನು ನೀಡುತ್ತದೆ. ನಿಶಕ್ತರಿಗೆ ಶಕ್ತಿ ತುಂಬಲು ಅನುಕೂಲಕರವಾಗಿರುವಂತಹ ಈ ಸಮೀಕ್ಷೆಯನ್ನು ವಿರೋಧ ಪಕ್ಷದ ಕೆಲವು ಮುಖಂಡರು ಹಾಗೂ ಮೇಲ್ವರ್ಗದ ಜನರು ತಮ್ಮ ದಬ್ಬಾಳಿಕೆಯ ಸರ್ವಾಧಿಕಾರದ ರಾಜಕೀಯ ಭವಿಷ್ಯ ಅಂತ್ಯ ಸನಿಹಿಸುತ್ತಿದೆ ಎಂದು ಭಾವಿಸಿ, ಸಾಮಾಜಿಕ ಕ್ರಾಂತಿಕಾರಿಯಾಗಿರುವ ಸಮೀಕ್ಷೆಯನ್ನು ವಿರೋಧ ಮಾಡುತ್ತಿದ್ದಾರೆ. ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಅಲ್ಲ, ಇದು ಜಾತಿಗಣತಿ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದರು.

‘ಕೇಂದ್ರದ ಮಂತ್ರಿಯೊಬ್ಬರು ಈ ಸಮೀಕ್ಷೆಯನ್ನು ನಡೆಸಲು ಬಿಡುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿರುವುದು ಸಮಾಜದಲ್ಲಿ ಗೊಂದಲವನ್ನು ಉಂಟು ಮಾಡುವ ಹುನ್ನಾರವಾಗಿರುತ್ತದೆ. ಆದರೆ ಕೇಂದ್ರ ಮಂತ್ರಿಗಳು ಒಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಪ್ರಧಾನ ಮಂತ್ರಿಯವರು ಅರ್ಥಿಕವಾಗಿ ಹಿಂದುಳಿದ ವರ್ಗದವವರಿಗೆ ಶೇ 10ರ ಮೀಸಲಾತಿಯನ್ನು ಸಂವಿಧಾನ ಬಾಹಿರವಾಗಿ ಘೋಷಣೆ ಮಾಡಿದಾಗ, ಇದೇ ಕೇಂದ್ರ ಮಂತ್ರಿಯವರ ಸಮುದಾಯದವರು ಅದರ ಪ್ರತಿಫಲವನ್ನು ಹೇಗೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಜಗಜ್ಜಾಹೀರವಾದ ವಿಷಯ. ಅಂದು ಕೇಂದ್ರ ಮಂತ್ರಿಯವರು ಶೇ 10ರ ಮೀಸಲಾತಿಯನ್ನು ವಿರೋಧ ಮಾಡಿದ್ದರೆ, ಇಂದು ಅವರ ವಿರೋಧ ಸೂಕ್ತವಾಗಿರುತ್ತಿತ್ತು. ಅವರ ಸಮುದಾಯಕ್ಕೆ ಅನುಕೂಲಕರವಾದರೆ ಮಾತ್ರ ಒಳಿತು ಇತರೆ ಹಿಂದುಳಿದ, ದಲಿತ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮುಖ್ಯಮಂತ್ರಿಯವರು ಸಾಮಾಜಿಕ ಕ್ರಾಂತಿಕಾರಕ ಸಮೀಕ್ಷೆ ನಡೆಸಿದರೆ ಅದು ರಾಜ್ಯದ ಹಿತಕ್ಕೆ ಮಾರಕ ಎಂದು ಹೇಳುತ್ತಿರುವುದೆ ಬಾಲಿಷವಾಗಿರುತ್ತದೆ’ ಎಂದು ಟೀಕಿಸಿದರು.

‘ಈ ಸಮೀಕ್ಷೆಯನ್ನು ವಿರೋಧ ಮಾಡುತ್ತಿರುವ ವಿರೋಧ ಪಕ್ಷದ ನಾಯಕರಲ್ಲಿ ಒಂದು ಪ್ರಶ್ನೆ. ಪ್ರಧಾನ ಮಂತ್ರಿಯವರು ಸಂಸತ್ತಿನಲ್ಲಿ,‘ ದೇಶದಾದ್ಯಂತ ಜಾತಿಗಣತಿ ನಡೆಸುತ್ತೇವೆ’ ಎಂದು ಘೋಷಣೆ ಮಾಡಿದಾಗ ವಿರೋಧಿಸದೆ ಇದ್ದವರು ಈಗ ರಾಜ್ಯದ ಸಮೀಕ್ಷೆಯನ್ನು ವಿರೋಧ ಮಾಡುತ್ತಿರುವುದೇಕೆ’ ಎಂದು ಪ್ರಶ್ನಿಸಿದರು.

‘ಬೆಂಗಳೂರು ನಗರವನ್ನು ಹೊರತುಪಡಿಸಿ ರಾಜ್ಯದಲ್ಲಿ ಶೇ 80 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ರಾಜ್ಯದ ಜನತೆ ಸಮೀಕ್ಷೆದಾರರು ಕೇಳಿದ ಪ್ರಶ್ನೆಗಳಿಗೆ ತಮಗೆ ಸೂಕ್ತವೆನಿಸಿದ ಮಾಹಿತಿಗಳನ್ನು ನೀಡಿ ಈ ಸಮೀಕ್ಷೆಯು ಯಶಸ್ವಿಯಾಗಲು ಸಹಕರಿಸಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪರವಾಗಿ ಹೃದಯ ಪೂರಕವಾಗಿ ವಂದನೆ ಸಲ್ಲಿಸುತ್ತೇವೆ. ಹಿಂದಿನ ಸಮೀಕ್ಷೆಗಳಿಗಿಂತ ಈ ಬಾರಿಯ ಸಮೀಕ್ಷೆಯಲ್ಲಿ ಜನರು ಅತಿ ಉತ್ಸಹದಿಂದ ಪಾಲ್ಗೊಳ್ಳುತ್ತಿರುವುದು ವಿರೋಧಿಗಳ ಎದೆಯಲ್ಲಿ ನಡುಕವನ್ನು ಉಂಟು ಮಾಡಿದೆ’ ಎಂದರು.

ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ್ ಎಂ. ಲಾತೂರ್, ಉಪಾಧ್ಯಕ್ಷ ಕೆ. ವೆಂಕಟಸುಬ್ಬರಾಜು, ಮಡಿವಾಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನಂಜಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.