ADVERTISEMENT

ಉಪ ಜಾತಿ ನಮೂದಿಸದಿದ್ದರೆ ಒಳ ಮೀಸಲು ಸೌಲಭ್ಯ ಸಿಗದು:

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:49 IST
Last Updated 27 ಏಪ್ರಿಲ್ 2025, 15:49 IST
ಚಿದರವಳ್ಳಿ ಮಹಾದೇವಸ್ವಾಮಿ
ಚಿದರವಳ್ಳಿ ಮಹಾದೇವಸ್ವಾಮಿ   

ಬೆಂಗಳೂರು: ‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಪ್ರಮಾಣ ಹಂಚಿಕೆಗಾಗಿ ದತ್ತಾಂಶ ಸಂಗ್ರಹಿಸಲು ರಾಜ್ಯದಾದ್ಯಂತ ಮೇ 5ರಿಂದ ಪರಿಶಿಷ್ಟ ಕುಟುಂಬಗಳ ಸಮೀಕ್ಷೆ ನಡೆಯಲಿದ್ದು, ಬಲಗೈ ಸಮುದಾಯಕ್ಕೆ ಸೇರಿದ 37 ಉಪ ಜಾತಿಗೆ ಸೇರಿದವರು ಛಲವಾದಿ/ ಚಲವಾದಿ ಎಂದು ನಮೂದಿಸಬೇಕು’ ಎಂದು ರಾಜ್ಯ ಛಲವಾದಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಚಿದರವಳ್ಳಿ ಮಹಾದೇವಸ್ವಾಮಿ ತಿಳಿಸಿದ್ದಾರೆ.

‘ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಪ್ರಮಾಣ ಹಂಚಿಕೆಗಾಗಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್‌ ಆಯೋಗದ ಶಿಫಾರಸಿನಂತೆ ಸರ್ಕಾರವು ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲಿದೆ. ಇದು ಜಾತಿ ಸಮೀಕ್ಷೆಯೇ ಹೊರತು ಧರ್ಮ ಸಮೀಕ್ಷೆಯಲ್ಲ. ಹೀಗಾಗಿ, ಪರಿಶಿಷ್ಟ ಜಾತಿಯವರು ತಮ್ಮ ಧರ್ಮದ ವಿಷಯಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ. ಸಮುದಾಯದ ಕೆಲವು ಕುಟುಂಬಗಳು ಬೌದ್ಧ ಧರ್ಮವನ್ನು ಸ್ವೀಕರಿಸಿವೆ. ಅದು ತಪ್ಪಲ್ಲ. ಆದರೆ, ಈ ಸಮೀಕ್ಷೆಯಲ್ಲಿ ಛಲವಾದಿ/ಚಲವಾದಿ ಎಂದು ನಮೂದಿಸಬೇಕು’ ಎಂದಿದ್ದಾರೆ.

‘ಚಲವಾದಿ ಪದ ಜಾತಿ ಪಟ್ಟಿಯಲ್ಲಿ 27ನೇ ಸ್ಥಾನದಲ್ಲಿದೆ. ಗೋಪ್ಯವಾಗಿ ಜಾತಿ ನಮೂದಿಸಲು ಕೂಡಾ ಆಯೋಗವು ಅವಕಾಶ ಮಾಡಿಕೊಟ್ಟಿದೆ. ಸಮೀಕ್ಷೆ ಸಂದರ್ಭದಲ್ಲಿ ಉಪ ಜಾತಿಗಳ ಹೆಸರು ನಮೂದಿಸದಿದ್ದರೆ ಆಯಾ ಜಾತಿಗಳಿಗೆ ಸೇರಿದವರ ಸಂಖ್ಯೆಯಲ್ಲಿ ಏರುಪೇರಾಗಲಿದೆ. ಇದರಿಂದಾಗಿ ಸರ್ಕಾರದಿಂದ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ವಿವಿಧ ಸೌಲಭ್ಯಗಳು, ಯೋಜನೆಗಳಲ್ಲಿ ಸಿಗುವ ಮೀಸಲಾತಿಯಿಂದ ಶಾಶ್ವತವಾಗಿ ವಂಚಿತರಾಗಬೇಕಾಗುತ್ತದೆ. ಹೀಗಾಗಿ, ಪ್ರತಿ ಗ್ರಾಮದಲ್ಲಿ ಮೂಲ ಜಾತಿಯ ಹೆಸರು ನೋಂದಾಯಿಸಬೇಕೆಂದು ಜಾಗೃತಿ ಮೂಡಿಸಬೇಕು. ದಲಿತರೆಲ್ಲರೂ ಒಂದೇ ಎಂಬ ಸಂದೇಶ ನೀಡುವ ಜೊತೆಗೆ, ಒಳ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡಬೇಕು’ ಎಂದು ಸಮುದಾಯದ ಜನರಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.