ADVERTISEMENT

ಜಾತಿಗಣತಿ ವಿಪಕ್ಷದವರಿಗೆ ನುಂಗಲಾರದ ತುತ್ತು: ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:01 IST
Last Updated 8 ಅಕ್ಟೋಬರ್ 2024, 14:01 IST
   

ಬೆಂಗಳೂರು: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿಗಣತಿ) ವರದಿಗೆ ಒಪ್ಪಿಗೆ ನೀಡಲು ಮುಂದಾಗಿರುವುದು ವಿರೋಧ ಪಕ್ಷದವರಿಗೆ ನುಂಗಲಾರದ ತುತ್ತಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮುಂದಿನ ದಿನಗಳಲ್ಲಿ ಈ ವರದಿಯ ಆಧಾರದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬಹುದೆಂದು ಎಲ್ಲರೂ ಹೇಳುತ್ತಿದ್ದಾರೆ. ಸಮುದಾಯಗಳಿಗೆ ಯೋಜನೆಗಳನ್ನು ನೀಡಬಾರದೇ’ ಎಂದು ಪ್ರಶ್ನಿಸಿದರು.

‘‌ಅ. 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವರದಿಯ ಕುರಿತು ‌ಚರ್ಚೆ ಮಾಡುತ್ತೇವೆಂದು ಮುಖ್ಯಮಂತ್ರಿ ಹೇಳಿದ್ದಾರೆ. ಉಪಸಮಿತಿ ರಚಿಸಬೇಕೇ ಅಥವಾ ಸದನದಲ್ಲಿ ಮಂಡಿಸಬೇಕೇ ಎಂಬುದನ್ನು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ. ವಸ್ತುಸ್ಥಿತಿಯನ್ನು ಜನರ ಮುಂದಿಡುತ್ತೇವೆ. ಅದನ್ನು ಬೇಡವೆಂದರೆ ಹೇಗೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರದಿಂದ ಜನಗಣತಿ ಈಗಾಗಲೇ ತಡವಾಗಿದೆ. ಪ್ರಧಾನ ಮಂತ್ರಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರು ಭೇಟಿ ಮಾಡಿದಾಗ ಜನಗಣತಿ ಮಾಡುವುದಾಗಿ ಹೇಳಿದ್ದರು. 2026 ಅಥವಾ 2027ರಲ್ಲಿ ಆರಂಭಿಸಿದರೆ, 2028ರಲ್ಲಿ ಚುನಾವಣೆ ಎದುರಾಗುತ್ತದೆ. ಆ ಸಂದರ್ಭದಲ್ಲಿಯೂ ವಿರೋಧ ಪಕ್ಷದವರು ಇದೇ ರೀತಿ ವಿರೋಧಿಸುತ್ತಾರೆಯೇ? ಸರ್ಕಾರ ಅಧಿಕೃತವಾಗಿ ಜಾತಿಗಣತಿ ಮಾಡಿದೆ. ಯಾರೊ ನಾಲ್ಕು ಜನ ಸೇರಿ ಮಾಡಿರುವುದಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.