ಆರ್. ಆಶೋಕ, ಸಿದ್ದರಾಮಯ್ಯ
ಪ್ರಜಾವಾಣಿ ಚಿತ್ರ
ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಮರು ಗಣತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
'ಈ ಹಿಂದೆ ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ ಎಂದು ಸಾರ್ವಜನಿಕರು, ಮಠಾಧೀಶರು, ಸಮುದಾಯಗಳ ಮುಖಂಡರು ಹಾಗೂ ಸ್ವತಃ ಕಾಂಗ್ರೆಸ್ ನಾಯಕರೇ ವಿರೋಧಿಸಿದ್ದರೂ ಅದನ್ನು ಬಲವಾಗಿ ಸಮರ್ಥಿಸಿಕೊಂಡು ಸಚಿವ ಸಂಪುಟದ ಮುಂದೆ ತರಲು ಇಷ್ಟೆಲ್ಲ ಹಠ ಹಿಡಿದಿದ್ದೀರಿ. ಈಗ ಹೈಕಮಾಂಡ್ ತಪರಾಕಿ ಹಾಕಿದಾಕ್ಷಣ ಮರು ಸಮೀಕ್ಷೆ ಮಾಡಲು ಒಪ್ಪಿದ್ದೀರಿ. ಹೈಕಮಾಂಡ್ ಶಂಖದಿಂದ ಬಂದರೆ ಮಾತ್ರ ತೀರ್ಥಾನಾ' ಎಂದು ಸಿಎಂಗೆ ಅಶೋಕ ಪ್ರಶ್ನಿಸಿದ್ದಾರೆ.
'ಸಿಎಂ ಸಿದ್ದರಾಮಯ್ಯನವರು 90 ದಿನಗಳ ಕಾಲಮಿತಿಯಲ್ಲಿ ಸಮೀಕ್ಷೆ ನಡೆಸುವ ಬಗ್ಗೆ ಹಲವು ಗಂಭೀರ ಪ್ರಶ್ನೆಗಳು ಎದುರಾಗಿವೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಸಮೀಕ್ಷೆ ಹೇಗೆ ಸಾಧ್ಯ ಎಂಬುದು ಜನಸಾಮಾನ್ಯರ ಆತಂಕವಾಗಿದೆ. ಸಮೀಕ್ಷೆ ನಡೆಸುವವರು ಯಾರು' ಎಂದು ಹೇಳಿದ್ದಾರೆ.
'ಆನ್‌ಲೈನ್ ಮೂಲಕ ಸಮೀಕ್ಷೆ ನಡೆಸುವ ಚಿಂತನೆ ಮತ್ತೊಂದು ಅವಿವೇಕದ ಕ್ರಮವೆಂದು ತೋರುತ್ತಿದೆ. ಅನೇಕ ಅಕ್ಷರಸ್ಥರೇ ಇಂದಿಗೂ ಆನ್‌ಲೈನ್ ವ್ಯವಸ್ಥೆಯಿಂದ ದೂರ ಇರುವಾಗ, ಇಂತಹ ಸಮೀಕ್ಷೆ ಹೇಗೆ ಸಾಧ್ಯ?' ಎಂದು ಹೇಳಿದ್ದಾರೆ.
'ಜಾತಿ ಜನಗಣತಿಗಾಗಿ ಈಗಾಗಲೇ ಖರ್ಚಾದ ₹167 ಕೋಟಿ ದುಂದುವೆಚ್ಚಕ್ಕೆ ಹೊಣೆ ಯಾರು? ಐಪಿಎಲ್ ವಿಜಯೋತ್ಸವ ದುರಂತ ಮರೆಮಾಚಲು ಬೃಹತ್ ನಾಟಕವೇ' ಎಂದು ಪ್ರಶ್ನಿಸಿದ್ದಾರೆ.
ಮಗದೊಂದು ಪೋಸ್ಟ್‌ನಲ್ಲಿ 'Outgoing ಸಿಎಂ ಸಿದ್ದರಾಮಯ್ಯ ಅವರ ಕರಾಳ ಅವಧಿ ಮುಕ್ತಾಯಗೊಳ್ಳುವ ಸುದಿನಕ್ಕೆ ಕನ್ನಡಿಗರು ಬಹಳ ದಿನ ಕಾಯಬೇಕಿಲ್ಲ. ಕಾಂಗ್ರೆಸ್ ಹೈಕಮಾಂಡ್ ಇತ್ತೀಚೆಗೆ ಸಿದ್ದರಾಮಯ್ಯನವರ ಬಗ್ಗೆ ತಾಳುತ್ತಿರುವ ಧೋರಣೆ ನೋಡಿದರೆ ಅಕ್ಟೋಬರ್-ನವೆಂಬರ್ ಕ್ರಾಂತಿಯಲ್ಲಿ ಸಿದ್ದರಾಮಯ್ಯನವರಿಗೆ ವಿಶ್ರಾಂತಿ ನೀಡುವುದು ನೂರಕ್ಕೆ ನೂರು ಗ್ಯಾರೆಂಟಿ ಅನ್ನಿಸುತ್ತಿದೆ' ಎಂದು ಹೇಳಿದ್ದಾರೆ.
'10 ವರ್ಷಗಳ ಹಿಂದೆ ಆರಂಭವಾದ ಸಿಎಂ ಸಿದ್ದರಾಮಯ್ಯ ಅವರ ಜಾತಿ ಜನಗಣತಿ ಎಂಬ ಬೃಹನ್ನಾಟಕ ಮೆಗಾ ಸೀರಿಯಲ್ ರೀತಿ ಇನ್ನೂ ಮುಂದುವರೆಯುತ್ತಲೇ ಇದೆ. ದಶವಾರ್ಷಿಕ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಗಣತಿಯನ್ನೂ ಸೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ NDA ಸರ್ಕಾರ ಈಗಾಗಲೇ ನಿರ್ಧಾರ ಮಾಡಿದೆ. ಈಗ ಮತ್ತೊಮ್ಮೆ ಕನ್ನಡಿಗರ ಬೆವರಿನ ತೆರಿಗೆ ಹಣವನ್ನ ವಿನಾಕಾರಣ ದುಂದುವೆಚ್ಚ ಮಾಡಿ ಅಪವ್ಯಯ ಮಾಡಬೇಡಿ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.