ADVERTISEMENT

ಜಾತಿ ಗಣತಿ ಸರಿಯಿಲ್ಲ ಎನ್ನಲು ಬಿಜೆಪಿಗೆ ನೈತಿಕ ಹಕ್ಕಿಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಅವಕಾಶವಿಲ್ಲ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 11:07 IST
Last Updated 22 ಏಪ್ರಿಲ್ 2025, 11:07 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ನಾಗಮಂಗಲ (ಮಂಡ್ಯ ಜಿಲ್ಲೆ): ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರು ನೀಡಿದ ವರದಿ ಸರಿಯಿಲ್ಲ ಎಂದು ಹೇಳಲು ಬಿಜೆಪಿಯವರಿಗೆ ನೈತಿಕ ಹಕ್ಕಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ದೊಡ್ಡಬಾಲ ಗ್ರಾಮದಲ್ಲಿ 39 ವರ್ಷಗಳ ಬಳಿಕ ನಡೆಯುತ್ತಿರುವ ಹುಚ್ಚಪ್ಪಸ್ವಾಮಿಯ ಹಾಗೂ ಹದಿನಾಲ್ಕು ಕೂಟದ ದೇವರುಗಳ ಜಾತ್ರಾ ಮಹೋತ್ಸವವನ್ನು ಮಂಗಳವಾರ ಉದ್ಘಾಟಿಸಲು ಬಂದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು.

ADVERTISEMENT

ಸಮೀಕ್ಷೆ ವರದಿ ಬಗ್ಗೆ ಪಕ್ಷದ ನಾಯಕರಿಂದ ಅಪಸ್ವರ ಎದ್ದಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ‘ವರದಿಯಲ್ಲಿ ಯಾವುದೇ ನ್ಯೂನತೆಗಳಿದ್ದರೂ ಸರಿಪಡಿಸಲಾಗುವುದು. ವರದಿ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಸಚಿವರಿಗೆ ತಿಳಿಸಲಾಗಿದ್ದು, ಅವುಗಳನ್ನು ಪರಿಶೀಲಿಸಿ ನಂತರ ಸೂಕ್ತ ತೀರ್ಮಾನವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು’ ಎಂದರು.

‘1984ರಲ್ಲಿ ನಡೆದ ಸಮೀಕ್ಷೆಯಲ್ಲಿದ್ದ ಮುಸ್ಲಿಮರ ಸಂಖ್ಯೆ ಈಗ ವರದಿಯಲ್ಲಿ ಶೇ 90ರಷ್ಟು ಹೆಚ್ಚಾಗಿದ್ದು, ಲಿಂಗಾಯತರ ಸಂಖ್ಯೆ ಕೇವಲ ಶೇ 8ರಷ್ಟು ಜಾಸ್ತಿಯಾಗಿರುವುದಾಗಿ ಬಿಜೆಪಿಯವರು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಇದು ಕಾಂತರಾಜು ಆಯೋಗದ ಅಂಕಿ–ಅಂಶಗಳ ಆಧಾರದ ಮೇಲೆ ಜಯಪ್ರಕಾಶ್ ಹೆಗಡೆಯವರು ಶಿಫಾರಸು ಮಾಡಿದ್ದಾರೆ’ ಎಂದರು.

ಹಿಂದಿ ಹೇರಿಕೆಗೆ ಅವಕಾಶವಿಲ್ಲ

ವಿಂಗ್ ಕಮಾಂಡರ್‌ನೊಬ್ಬ ಕನ್ನಡಿಗನ ಮೇಲೆ ಹಲ್ಲೆ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿ, ತಪ್ಪೆಸೆಗಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ. ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನಕ್ಕೆ ಸರ್ಕಾರದ ವಿರೋಧವಿದೆ. ರಾಜ್ಯದಲ್ಲಿ ಮಾತೃಭಾಷೆ ಕನ್ನಡ ಹಾಗೂ ಇಂಗ್ಲಿಷ್ ಬಳಕೆಗೆ ಪೂರಕವಾದ ‘ದ್ವಿಭಾಷಾ ನೀತಿ’ ಜಾರಿಯಲ್ಲಿದೆ. ರಾಜ್ಯದಲ್ಲಿ ತ್ರಿಭಾಷಾ ಸೂತ್ರವಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೃಹತ್‌ ಮಲ್ಲಿಗೆ ಮತ್ತು ಸೇಬಿನ ಹಾರ ಹಾಕಿದ ಅಭಿಮಾನಿಗಳು ಬೆಳ್ಳಿಗದೆ, ಕುರಿಮರಿ ಮತ್ತು ಕಂಬಳಿ ನೀಡಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.