ಬೆಂಗಳೂರು: ‘ಜಾತಿ–ಜಾತಿಗಳ ಮಧ್ಯೆ ಸಂಘರ್ಷ ಸೃಷ್ಟಿಸಿ, ಸಮಾಜವನ್ನು ಒಡೆಯುವ ಉದ್ದೇಶದಿಂದ ಸಿದ್ದರಾಮಯ್ಯ ಜಾತಿಗಣತಿ ವರದಿಯನ್ನು ಮುನ್ನೆಲೆಗೆ ತಂದಿದ್ದಾರೆ. ಈ ಮೂಲಕ ರಾಜ್ಯವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿಗಣತಿ ವರದಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಜನಸಮುದಾಯಗಳ ಮಧ್ಯೆ ಒಡಕು ಮೂಡಿಸುತ್ತಿದ್ದಾರೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಮತ್ತು ಸಂವಿಧಾನ ಪ್ರತಿಯನ್ನು ಸದಾ ಕೈಯ್ಯಲ್ಲಿ ಹಿಡಿದು ಶೋ ಮಾಡುವ ಕಾಂಗ್ರೆಸ್, ಸಮಾಜವನ್ನು ಒಡೆಯುತ್ತಿದೆ’ ಎಂದರು.
‘ಇವರು ಅಧಿಕಾರಕ್ಕೆ ಬಂದು ಎರಡು ವರ್ಷವಾಗುತ್ತಾ ಬಂತು. ಆ ಅವಧಿಯಲ್ಲಿ ಜಾತಿಗಣತಿ ವರದಿ ಏಕೆ ಬಿಡುಗಡೆ ಮಾಡಲಿಲ್ಲ. ಈಗ ಅವರ ಕುರ್ಚಿಗೆ ಕುತ್ತು ಬಂದಿದೆ. ಅದನ್ನೆಲ್ಲಾ ಮರೆಮಾಚಲು ಮತ್ತು ತಮ್ಮ ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ ವರದಿಯನ್ನು ಚರ್ಚೆಗೆ ಎತ್ತಿಕೊಂಡಿದ್ದಾರೆ’ ಎಂದರು.
‘ರಾಜ್ಯದಲ್ಲಿ ಜನರ ಆಕ್ರೋಶ ಸ್ಫೋಟವಾಗುವ ಹಂತ ತಲುಪಿದೆ. ಈ ಸರ್ಕಾರದ ಗ್ಯಾರಂಟಿಗಳ ವೈಫಲ್ಯ, ಭ್ರಷ್ಟಾಚಾರ, ದರ ಏರಿಕೆಯಿಂದ ಜನ ರೋಸಿ ಹೋಗಿದ್ದಾರೆ. ಅವರ ಗಮನವನ್ನು ಬೇರೆಡೆ ಸೆಳೆಯಲು ಸಿದ್ದರಾಮಯ್ಯ ಅವರ ಸರ್ಕಾರ ಜಾತಿ ಗಣತಿಯ ನಾಟಕವಾಡುತ್ತಿದೆ’ ಎಂದು ಆರೋಪಿಸಿದರು.
‘ಕಾಂತರಾಜ ಆಯೋಗವು ವರದಿ ಸಿದ್ದಮಾಡಿ ಹತ್ತು ವರ್ಷ ಕಳೆದಿದೆ. ಈಗ ಆ ವರದಿಗೆ ಯಾವ ಅರ್ಥವೂ ಇಲ್ಲ. ಈ ವರದಿಗಾಗಿ ಮಾಡಲಾದ ಸಮೀಕ್ಷೆ ಸರಿಯಾಗಿ ನಡೆದೇ ಇಲ್ಲ. ಎಲ್ಲರ ಮನೆಗೆ ಹೋಗಿ ದತ್ತಾಂಶ ಕಲೆ ಹಾಕಿಲ್ಲ. ದೇವೇಗೌಡ ಅವರ ಮನೆಗೂ ಬಂದಿಲ್ಲ. ಇದು ಯಾವ ರೀತಿಯ ಸಮೀಕ್ಷೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.