ಬೆಂಗಳೂರು: ‘ರಾಜ್ಯ ಸರ್ಕಾರ ತಯಾರಿಸಿದ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿಯನ್ನು ಖುದ್ದು ಕಾಂಗ್ರೆಸ್ ಹೈಕಮಾಂಡ್ ಕಿತ್ತು ಬಿಸಾಕಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ.ಸುನಿಲ್‌ಕುಮಾರ್ ಟೀಕಿಸಿದ್ದಾರೆ.
‘₹150 ಕೋಟಿ ವೆಚ್ಚ ಮಾಡಿ ತಯಾರಿಸಿದ ಈ ವರದಿ ರಾಜ್ಯದ ತೆರಿಗೆದಾರರಿಗೆ ಮಾಡಿದ ಮೋಸ. ಅಲ್ಲದೇ, ಹಿಂದುಳಿದ ಹಾಗೂ ಶೋಷಿತ ಸಮುದಾಯಕ್ಕೆ ಮಾಡಿದ ಮಹಾಮೋಸ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
‘ಜಾತಿಗಣತಿ ವರದಿಯ ದತ್ತಾಂಶದಲ್ಲಿ ಲೋಪವಿದೆ. ಇದನ್ನು ಪುನರ್‌ಪರಿಶೀಲಿಸಬೇಕು ಎಂದು ಬಿಜೆಪಿ ಪದೇ ಪದೇ ಆಗ್ರಹಿಸಿತ್ತು. ಆದರೆ, ಸಿದ್ದರಾಮಯ್ಯ ಅವರು ಇಂಥ ಸೂಕ್ಷ್ಮ ವಿಚಾರದಲ್ಲೂ ತಮ್ಮ ಎಂದಿನ ಉಡಾಫೆ ಧೋರಣೆ ಮುಂದುವರಿಸಿದ್ದರು. ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿದ್ದರು. ಸಿದ್ದರಾಮಯ್ಯ ಮಾತ್ರವಲ್ಲ, ಕಾಂಗ್ರೆಸ್ ಹೈಕಮಾಂಡ್ ಕೂಡ ರಾಜ್ಯದ ಹಿಂದುಳಿದ ವರ್ಗ, ಶೋಷಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ಸಿದ್ದರಾಮಯ್ಯ ಇದೇ ವಿಚಾರ ಇಟ್ಟುಕೊಂಡು ರಾಜ್ಯದ ಜನರನ್ನು ಮೂರ್ಖರನ್ನಾಗಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಈ ಎಲ್ಲ ಅವಾಂತರಗಳ ಕಾರಣಕ್ಕಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.