ವಿಜಯಪುರ: ‘ಸೋನಿಯಾ ಗಾಂಧಿ ಅಣತಿಯಂತೆ ರಾಜ್ಯದಲ್ಲಿ ಜಾತಿ ಗಣತಿ ನಡೆಯುತ್ತಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಬ್ರಾಹ್ಮಣ ಎಂಬುದು ಸೋನಿಯಾ ಗಾಂಧಿ ಕೊಟ್ಟಿರೋ ಹೊಸ ಹೊಸ ಜಾತಿ ನಾಮಗಳು’ ಎಂದು ಹೇಳಿದರು.
‘ಭಾರತವನ್ನು ಕೆಲವರು ಕ್ರಿಶ್ಚಿಯನ್ ರಾಷ್ಟ್ರ, ಇನ್ನು ಕೆಲವರು ಮುಸ್ಲಿಂ ರಾಷ್ಟ್ರ ಮಾಡಬೇಕೆಂದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶ, ವಿಶ್ವದಲ್ಲೇ ಇಲ್ಲದ ಜಾತಿಗಳು ಹೊಸದಾಗಿ ಸೃಷ್ಟಿಯಾಗಿವೆ’ ಎಂದು ಕಿಡಿಕಾರಿದರು.
‘ಸೋನಿಯಾ ಗಾಂಧಿ ನಿರ್ದೇಶನದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೀಳು ಮಟ್ಟದ ಜಾತಿ ವರ್ಗೀಕರಣ ಮಾಡಿದ್ದಾರೆ. ಈ ಕುರಿತು ಅವರದ್ದೆ ಸಚಿವ ಸಂಪುಟದಲ್ಲಿ ಗೊಂದಲವಾಗಿದೆ. ಸಿದ್ದರಾಮಯ್ಯ ಇದೆಲ್ಲೆ ಕೈಬಿಡಬೇಕು, ಜಾತಿ ಗಣತಿ ಮಾಡುವುದಕ್ಕೆ ರಾಜ್ಯಕ್ಕೆ ಅಧಿಕಾರ ಇಲ್ಲ, ಕೇಂದ್ರಕ್ಕೆ ಮಾತ್ರ’ ಎಂದರು.
‘ಲಿಂಗಾಯತರು, ಒಕ್ಕಲಿಗರು ಕಡಿಮೆ ಇದ್ದಾರೆ, ಮುಸ್ಲಿಂಮರು ಹೆಚ್ಚಿದ್ದಾರೆ ಎಂದು ತೋರಿಸಲು ಜಾತಿ ಗಣತಿ ನಾಟಕ ಆರಂಭಿಸಿದ್ದಾರೆ’ ಎಂದು ಆರೋಪಿಸಿದರು.
ಎಡಿಟ್ ಮಾಡಿದ್ದಾರೆ:
‘ದಸರಾ ಉದ್ಘಾಟನೆಗೆ ದಲಿತ ಮಹಿಳೆಯರಿಗೆ ಅವಕಾಶವಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ಕೆಲವು ಎಡಿಟರ್‌ಗಳಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಕೂಡಿ ನನ್ನ ಹೇಳಿಕೆಯನ್ನು ಎಡಿಟ್ ಮಾಡಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.