ADVERTISEMENT

Caste Census: ಶಿಕ್ಷಕರಿಗೆ ಬಿಸಿತುಪ್ಪವಾದ ಸಮೀಕ್ಷೆ

ಬೆನ್ನಟ್ಟಿಸಿಕೊಂಡು ಬಂದ ಸಾಕು ನಾಯಿ - ಓಡಿಬಂದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 0:30 IST
Last Updated 26 ಸೆಪ್ಟೆಂಬರ್ 2025, 0:30 IST
<div class="paragraphs"><p>ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆಲವು ಶಿಕ್ಷಕರು ಗುರುವಾರ ಬಿಇಒಗೆ ಮನವಿ ಸಲ್ಲಿಸಿದರು</p></div>

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆಲವು ಶಿಕ್ಷಕರು ಗುರುವಾರ ಬಿಇಒಗೆ ಮನವಿ ಸಲ್ಲಿಸಿದರು

   

ಮಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಹೋಗುತ್ತಿರುವ ಶಿಕ್ಷಕರು ತಾಂತ್ರಿಕ ಸಮಸ್ಯೆಯ ಜೊತೆಗೆ, ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

‘ಗ್ರಾಮೀಣ ಪ್ರದೇಶದ ಒಂಟಿ ಮನೆಗೆ ಸಮೀಕ್ಷೆಗೆ ತೆರಳಿದ ಶಿಕ್ಷಕಿಯೊಬ್ಬರಿಗೆ ಕಹಿ ಅನುಭವ ಆಗಿದೆ. ಕಂಠಪೂರ್ತಿ ಮದ್ಯಸೇವನೆ ಮಾಡಿಕೊಂಡು, ಮಾತನಾಡಲಾಗದ ಸ್ಥಿತಿಯಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಆ ಮನೆಯ ಯಜಮಾನನನ್ನು ಕಂಡ ಶಿಕ್ಷಕಿ ಭಯದಿಂದ ಓಡಿ ಬಂದಿದ್ದಾರೆ’ ಎಂದು ಪುತ್ತೂರು ತಾಲ್ಲೂಕಿನ ಶಿಕ್ಷಕರ ಸಂಘದ ಮುಖಂಡರೊಬ್ಬರು ತಿಳಿಸಿದರು.

ADVERTISEMENT

‘ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆಗೆ ಹೋಗುವ ಶಿಕ್ಷಕರ ಪಡಿಪಾಟಲು ಅಷ್ಟಿಷ್ಟಲ್ಲ. ಸಮೀಕ್ಷೆಗೆ ತೆರಳಿದಾಗ ಮನೆಯ ಸಾಕು ನಾಯಿ ಬೆನ್ನಟ್ಟಿಕೊಂಡು ಬಂದು, ಜೀವ ಕೈಯಲ್ಲಿ ಉಳಿಸಿಕೊಂಡರೆ ಸಾಕು ಎಂದು ಒಂದಿಬ್ಬರು ಶಿಕ್ಷಕರು ಓಡಿ ಬಂದಿದ್ದಾರೆ. ಶಿಕ್ಷಕರು ಕಾರ್ಯ ನಿರ್ವಹಿಸುವ ಸ್ಥಳದ ಸುತ್ತಮುತ್ತಲಿನ 8 ಕಿ.ಮೀ ವ್ಯಾಪ್ತಿಯಲ್ಲಿ ಸಮೀಕ್ಷೆಗೆ ನೇಮಿಸಬೇಕು ಎಂಬ ಬೇಡಿಕೆ ಸಲ್ಲಿಸಿದ್ದರೂ, ಇದು ಅನುಷ್ಠಾನ
ಗೊಂಡಿಲ್ಲ’ ಎಂದು ಅವರು ಬೇಸರಿಸಿದರು.

‘ಸಮರ್ಪಕವಾಗಿ ನೆಟ್‌ವರ್ಕ್ ಸಿಗದ ಪರಿಣಾಮ ದಿನಕ್ಕೆ 3–4 ಮನೆಗಳ ಸಮೀಕ್ಷೆ ನಡೆಸಲೂ ಕಷ್ಟವಾಗಿದೆ. ಸಮೀಕ್ಷೆಗೆ ತೆರಳಿದಾಗ ಮನೆಯವರು ಶಿಕ್ಷಕರ ಬಳಿ ದಾಖಲೆ ಕೇಳುತ್ತಾರೆ. ಸಮೀಕ್ಷಕರಿಗೆ ನೇಮಕಾತಿ ಆದೇಶವನ್ನೂ ಕೊಟ್ಟಿಲ್ಲ. ಮನೆ ಪಟ್ಟಿ ಇಲ್ಲದೆ, ಮನೆ ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ. ಸಮೀಕ್ಷಕರಿಗೆ ಮನೆ ಪಟ್ಟಿ ಒದಗಿಸಬೇಕು, ಸಮೀಕ್ಷೆಗೆ ಪೂರಕ ವಾತಾವರಣ ಕಲ್ಪಿಸಿದರೆ, ಸಮೀಕ್ಷಕರು ಅಚ್ಚುಕಟ್ಟಾಗಿ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಹಿರಿಯ ಅಧಿಕಾರಿಗಳಲ್ಲಿ ಬೇಡಿಕೆ ಇಡಲಾಗಿದೆ’ ಎಂದು ಶಿಕ್ಷಕ ಶಿವು ರಾಥೋಡ್ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಆ್ಯಪ್‌ ಸಮಸ್ಯೆಯಿಂದಾಗಿ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

‘ಗಣತಿ ಕಾರ್ಯದಲ್ಲಿ ಶಿಕ್ಷಕರು ಪಾಲ್ಗೊಂಡಿದ್ದಾರೆ. ಆದರೆ ಆ್ಯಪ್‌ನ ಸಮಸ್ಯೆಯಿಂದಾಗಿ ಮರಳಿ ಬಂದಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ನಾವು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಆದರೆ ಇನ್ನೂ ಪರಿಹಾರವಾಗಿಲ್ಲ’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ದಿನಕರ ಶೆಟ್ಟಿ ಅಂಪಾರು ತಿಳಿಸಿದರು.

ಶಿಕ್ಷಕನ ಮೇಲೆ ಬೀದಿನಾಯಿ ದಾಳಿ: (ಬಂಗಾರಪೇಟೆ ವರದಿ):

ತಾಲ್ಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ಗುರುವಾರ ಸಮೀಕ್ಷೆಗೆ ತೆರಳಿದ್ದ ಶಿಕ್ಷಕ ವೆಂಕಟಪ್ಪ ಅವರ ಮೇಲೆ ಬೀದಿನಾಯಿಯೊಂದು ದಾಳಿ ಮಾಡಿದೆ.

ಹಿಂದಿನಿಂದ ಬಂದ ನಾಯಿ ಏಕಾಏಕಿ ಕಾಲನ್ನು ಕಚ್ಚಿದೆ. ಕಾಲಿನಲ್ಲಿ ನಾಯಿಯ ಮೂರು ಹಲ್ಲುಗಳ ಗುರುತು ಮೂಡಿದ್ದು ರಕ್ತಸ್ರಾವವಾಗಿದೆ. ಇತರ ಶಿಕ್ಷಕರು ಅವರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಮೂರು ದಿನ ಕಳೆದರೂ ಶೂನ್ಯ ಸಮೀಕ್ಷೆ!

ಚಿಕ್ಕಬಳ್ಳಾಪುರ: ತಾಂತ್ರಿಕ ಸಮಸ್ಯೆಗಳಿಂದಾಗಿ ಮೂರು ದಿನ ಕಳೆದರೂ ಒಂದು ಮನೆಯನ್ನೂ ಸಮೀಕ್ಷೆ ಮಾಡಲು ಸಾಧ್ಯವಾಗಿಲ್ಲ ಸಮೀಕ್ಷೆಗೆ ನಿಯೋಜಿಸಿರುವ ಶಿಕ್ಷಕರು ಹೇಳಿದ್ದಾರೆ. 

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವೇಳೆ ಎದುರಾಗಿರುವ ಲೋಪಗಳನ್ನು ಸರಿಪಡಿಸುವಂತೆ ಗುರುವಾರ ತಾಲ್ಲೂಕು ಕಚೇರಿ ಎದುರು  ಪ್ರತಿಭಟನೆ ನಡೆಸಿದರು. ಶಿಕ್ಷಕರು ಕೆಲಸ ಮಾಡುವ ಗ್ರಾಮಗಳನ್ನು ಬಿಟ್ಟು ಬೇರೆ ಗ್ರಾಮಗಳಿಗೆ ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ  ಎಂದು ತಾಂತ್ರಿಕ ಸಮಸ್ಯೆಗಳ ಪಟ್ಟಿ ಮುಂದಿಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಆ್ಯಪ್‌ನಲ್ಲಿ ತೇರದಾಳ ತಾಲ್ಲೂಕು ಇಲ್ಲ

ಹುಬ್ಬಳ್ಳಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಬೇರೆ ಬೇರೆ ಸ್ವರೂಪದ ಸಮಸ್ಯೆಗಳು ತಲೆದೋರುತ್ತಿವೆ. ಸಮರ್ಪಕವಾಗಿ ನೆಟ್‌ವರ್ಕ್ ಸಿಗದಿರುವುದು ಸೇರಿ ಹಲವು ಸಮಸ್ಯೆಗಳನ್ನು ಸಮೀಕ್ಷೆದಾರರು ಗುರುವಾರ ಎದುರಿಸಿದರು.

‘ಬಾಗಲಕೋಟೆ ಜಿಲ್ಲೆಯ ನೂತನ ತಾಲ್ಲೂಕು ತೇರದಾಳ ಹೆಸರನ್ನು ಆ್ಯಪ್‌ನಲ್ಲಿ ಸೇರ್ಪಡೆ ಮಾಡಲಾಗಿಲ್ಲ. ಹಿಂದಿ ರಬಕವಿ–ಬನಹಟ್ಟಿ ತಾಲ್ಲೂಕಿನ ಹೆಸರಿನಲ್ಲೇ ಸಮೀಕ್ಷೆ ಪ್ರಕ್ರಿಯೆ ಮುಂದುವರೆದಿದೆ. ತೇರದಾಳ ಸೇರಿ ಅಖಂಡ ರಬಕವಿ–ಬನಹಟ್ಟಿ ತಾಲ್ಲೂಕಿಗೆ 562 ಬ್ಲಾಕ್‌ಗಳನ್ನು ರಚಿಸಿ, ಪ್ರತಿ ಬ್ಲಾಕ್‌ಗೆ ಒಬ್ಬರಂತೆ ಸಮೀಕ್ಷಕರು ಸಮೀಕ್ಷೆ ಆರಂಭಿಸಿದ್ದಾರೆ’ ಎಂದು ಸ್ಥಳೀಯರು ಆಕ್ಷೇಪಿಸಿದರು.

‘ಆ್ಯಪ್‌ನಲ್ಲಿ ಲೊಕೇಶನ್ ಜಾಗದಲ್ಲಿ ತೇರದಾಳ ಹೆಸರು ಸೇರಿಸಲು ಎರಡು–ಮೂರು ದಿನ ಕಾದೆವು. ಕೊನೆಗೆ ರಬಕವಿ–ಬನಹಟ್ಟಿ ತಾಲ್ಲೂಕಿನ ಲೊಕೇಶನ್‌ನಲ್ಲಿ ತೇರದಾಳ ಗ್ರಾಮಗಳನ್ನು ಸೇರಿಸಿ, ಸಮೀಕ್ಷೆ ಆರಂಭಿಸಿದೆವು. ಮೇಲಧಿಕಾರಿಗಳ ಜೊತೆಗೆ ಚರ್ಚಿಸಿ, ತೇರದಾಳ ಲೊಕೇಶನ್ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮವಹಿಸಲಾಗುವುದು’ ಎಂದು ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ತಿಳಿಸಿದರು.

ಕಾಡಿನ ಕುರಿಹಟ್ಟಿಗೆ ಹೋದ ಶಿಕ್ಷಕ

ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆಯಲ್ಲಿ ಲೊಕೇಶನ್ ಟ್ಯಾಗ್ ಗೊಂದಲದಿಂದ ಸಮೀಕ್ಷೆದಾರ ಮಂಜಪ್ಪ.ಎಸ್ ಅವರು ಕಾಡಿನ ಕುರಿಹಟ್ಟಿಗೆ ತಲುಪಿ, ಮನೆಗಾಗಿ ಹುಡುಕಾಟ ನಡೆಸಿದರು.

ಪಟ್ಟಣದ ಹೊರವಲಯದ ದೇವಿನಗರದ 19ನೇ ವಾರ್ಡ್‌ನ ರೇವಣಸಿದ್ದಪ್ಪ ಬಡಾವಣೆಗೆ ಲೊಕೇಶನ್ ಟ್ಯಾಗ್ ಮೂಲಕ ಮಂಜಪ್ಪ ತೆರಳಿದರು. ಎರಡು ಮನೆಗಳ ಬಳಿಕ ಮುಂದಿನ ಮನೆಗೆ ಲೊಕೇಶನ್ ಹಾಕಿದಾಗ, 2-3 ಕಿಮೀ ದೂರದ ಹೊಲಗದ್ದೆಗಳ ನಡುವಿನ ಕುರಿ ಹಟ್ಟಿಗೆ ಕರೆದೊಯ್ದಿದೆ. 'ಮೂರು ಕಿಮೀ ನಡೆದುಹೋದರೆ ಅಲ್ಲಿ ಕುರಿಹಟ್ಟಿ ಇದೆ. ಮ್ಯಾಪಿಂಗ್ ಸಮಸ್ಯೆಯಿಂದ ನಿಯೋಜಿಸಿರುವ ಮನೆಗಳು ಲೊಕೇಶನ್‌ನ ಸಿಗಲಿಲ್ಲ’ ಎಂದು ಶಿಕ್ಷಕ ಮಂಜಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.