
ಬೆಂಗಳೂರು: ‘ಜಾತಿ ಪ್ರಮಾಣಪತ್ರಗಳ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನಾಗರಿಕ ಹಕ್ಕುಗಳ ಘಟಕಕ್ಕೆ ಸ್ವಯಂ ಪ್ರೇರಿತ ತನಿಖೆ ಕೈಗೊಳ್ಳುವ ಅವಕಾಶವಿಲ್ಲ’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.
ತಮ್ಮ ಜಾತಿ ಪ್ರಮಾಣದ ಸಿಂಧುತ್ವಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನಾಗರಿಕ ಹಕ್ಕುಗಳ ಜಾರಿ ವಿಭಾಗದ ಡಿವೈಎಸ್ಪಿಗೆ ನಿರ್ದೇಶನ ನೀಡಲಾಗಿದ್ದ ಕ್ರಮವನ್ನು ಪ್ರಶ್ನಿಸಿ ಹಾವೇರಿ ಜಿಲ್ಲೆಯ ಲಕ್ಮಾಪುರದ ನಿವೃತ್ತ ಮುಖ್ಯ ಶಿಕ್ಷಕ ಟಿ.ಎಚ್.ಹೊಸಮನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
‘ನಾಗರಿಕ ಹಕ್ಕುಗಳ ಜಾರಿ ಕೋಶವು ಜಾತಿ ಪ್ರಮಾಣಪತ್ರದ ಸಿಂಧುತ್ವದ ಕುರಿತಂತೆ ಸ್ವಯಂಪ್ರೇರಿತ ತನಿಖೆ ಕೈಗೆತ್ತಿಕೊಳ್ಳುವ ಅಧಿಕಾರ ಹೊಂದಿಲ್ಲ. ಆದರೆ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನೀಡುವ ವರದಿಯ ಬಳಿಕ ತನಿಖೆ ಕೈಗೊಳ್ಳುವ ಅಧಿಕಾರ ಹೊಂದಿರುತ್ತದೆ. ಹೀಗಾಗಿ, ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಸಂಬಂಧಿಸಿದಂತೆ ನಾಗರಿಕ ಹಕ್ಕುಗಳ ಜಾರಿ ಘಟಕದ ನಿರ್ದೇಶನದ ಅನುಸಾರ ಕೈಗೊಂಡಿರುವ ಪ್ರಕ್ರಿಯೆ ಮತ್ತು ಅದರ ನಂತರದ ಎಲ್ಲ ಪ್ರಕ್ರಿಯೆಗಳು ಅನೂರ್ಜಿತವಾಗಲಿವೆ’ ಎಂದು ನ್ಯಾಯಪೀಠ ಹೇಳಿದೆ.
‘ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮೀಸಲಾತಿ ಇತ್ಯಾದಿ) ನಿಯಮ–1992ರ 7ರ ಉಪ ನಿಯಮ(4)ರಡಿ ಯಾವುದೇ ವ್ಯಕ್ತಿ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ತನಿಖೆ ನಡೆಸಲು ಸೂಚಿಸಿದರೆ ಮಾತ್ರವೇ ನಾಗರಿಕ ಹಕ್ಕುಗಳ ಜಾರಿ ಘಟಕ ಅದನ್ನು ಕಾರ್ಯರೂಪಕ್ಕೆ ತರಬಹುದಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಹೊಸಮನಿ ಅವರಿಗೆ ಲಭ್ಯವಾಗಬೇಕಾದ ಪ್ರಯೋಜನಗಳನ್ನು ತಡೆಹಿಡಿದಿದ್ದರೆ ತಕ್ಷಣವೇ ಬಿಡುಗಡೆ ಮಾಡಬೇಕು. ಆದರೆ, ಅರ್ಜಿದಾರರ ಕುಟುಂಬದ ಸದಸ್ಯರು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ್ದವರು ಎಂದು ಹೇಳಿಕೊಂಡು ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಜಿದಾರರ ಜಾತಿ ಪ್ರಮಾಣಪತ್ರವನ್ನು ಬಳಕೆ ಮಾಡಲು ಅವಕಾಶವಿಲ್ಲ’ ಎಂದು ವಿವರಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲರಾದ ಬಿ.ವಿಜಯಕುಮಾರ್ ಮತ್ತು ಜಿ.ಕೆ.ಹಿರೇಗೌಡರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.