ADVERTISEMENT

ಚರ್ಮ ವಾದ್ಯ ತಯಾರಿಸುವ ಕೈಗಳ ಮರೆಯುವ ರಾಜಕಾರಣ: ಗಾಯಕ ಟಿ.ಎಂ. ಕೃಷ್ಣ

ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅಭಿಮತ

ಸುಕೃತ ಎಸ್.
Published 10 ಆಗಸ್ಟ್ 2025, 0:01 IST
Last Updated 10 ಆಗಸ್ಟ್ 2025, 0:01 IST
ಗೋಷ್ಠಿಯಲ್ಲಿ ಶೈಲಜಾ, ಟಿ.ಎಂ.ಕೃಷ್ಣ ಮತ್ತು ಸುಮಂಗಲಾ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಗೋಷ್ಠಿಯಲ್ಲಿ ಶೈಲಜಾ, ಟಿ.ಎಂ.ಕೃಷ್ಣ ಮತ್ತು ಸುಮಂಗಲಾ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಚಿಮ್ಮುತ್ತಿರುವ ಬಿಸಿ ರಕ್ತದ ಮಡುವಿನಿಂದ ಮಾಂಸವನ್ನು ಕೆತ್ತಿ ತೆಗೆದು ಚರ್ಮ ಹದಗೊಳಿಸಬೇಕು. ಬಳಿಕವೇ ಅದು ಮೃದಂಗವಾಗುತ್ತದೆ. ನಾದ ಹೊಮ್ಮುತ್ತದೆ. ಇದನ್ನು ತಯಾರಿಸುವವರು ಸಮಾಜದ ತಳಸ್ತರದವರು. ಇದನ್ನು ನುಡಿಸುವ ಕೈಗಳು ಪ್ರಬಲ ಜಾತಿಯವರದ್ದು. ನಾದ ಹೊಮ್ಮಿದ ಬಳಿಕ ವಾದ್ಯ ತಯಾರಿಸಿದ ಕೈಗಳು ಮರೆತೇ ಹೋಗುತ್ತವೆ. ಇದು ನಿರ್ಲಕ್ಷ್ಯವೂ ಇರಬಹುದು, ಉದ್ದೇಶಪೂರ್ವಕವೂ ಆಗಿರಬಹುದು...’

– ಸಂಗೀತ ಲೋಕ, ಅದರೊಳಗಿನ ಜಾತಿವಾದ, ಇದಕ್ಕಿರುವ ವಿವಿಧ ಮುಖಗಳು, ಅದು ಪ್ರಕಟಗೊಳ್ಳುವ ಬಗೆ, ಜಾತಿವಾದದ ಸಮರ್ಥನೆಗೆ ಪ್ರಬಲ ಜಾತಿಗಳು ನೀಡುವ ವಿವಿಧ ಕಾರಣಗಳನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರು ವಿವರಿಸುತ್ತಾ ಸಾಗಿದರು. ಬುಕ್‌ಬ್ರಹ್ಮ ಸಂಸ್ಥೆ ನಗರದಲ್ಲಿ ಆಯೋಜಿಸಿದ್ದ ‘ಸಾಹಿತ್ಯ ಹಬ್ಬ 2025’ರ ‘ಇದು ಯಾರ ಪರಂಪರೆ? ಕಲೆ, ಜಾತಿ ಮತ್ತು ಮೌನದ ಪರಂಪರೆ’ ಗೋಷ್ಠಿಯು ಇದಕ್ಕೆ ಸಾಕ್ಷಿಯಾಯಿತು.

‘ದಲಿತರು, ಬುಡಕಟ್ಟು ಸಮುದಾಯದ ಜನರ ಬಳಿಗೆ ಹೋಗಿ, ನಿಮ್ಮ ವಾದ್ಯಗಳನ್ನು ಯಾರು ತಯಾರಿಸಿ ಕೊಡುತ್ತಾರೆ ಎಂದು ಕೇಳಿ. ‘ನಾವೇ ತಯಾರಿಸಿಕೊಳ್ಳುತ್ತೇವೆ’ ಎಂದು ಉತ್ತರಿಸುತ್ತಾರೆ. ಚರ್ಮ ವಾದ್ಯವನ್ನು ಇವರೇ ತಯಾರಿಸಿಕೊಂಡು, ಇವರೇ ನುಡಿಸುವ ಪರಂಪರೆಯೂ ಇದೆ. ಆದರೆ, ಪ್ರಬಲ ಜಾತಿಯವರು ತಮಗೆ ಬೇಕಾದ ಚರ್ಮ ವಾದ್ಯವನ್ನು ತಯಾರಿಸಿಕೊಳ್ಳುವುದಿಲ್ಲ. ಚರ್ಮ ವಾದ್ಯಕ್ಕೆ ಅಂಟಿರುವ ‘ರಾಜಕಾರಣ’ವಿದು’ ಎಂದರು.

ADVERTISEMENT

‘ತಳಸ್ತರದ ಜನರು ತಯಾರಿಸುವ ಮೃದಂಗದ ‘ಧಿನ್ನಾ’ ನಾದಕ್ಕೆ ಆಹಾ! ಎನ್ನುತ್ತೇವೆ. ಆದರೆ, ಈ ನಾದವನ್ನು ತಯಾರಿಸುವ ಕೈಗಳ ಕುರಿತು, ಆ ಜ್ಞಾನದ ಕುರಿತು ನಾವು ಚರ್ಚಿಸುವುದೇ ಇಲ್ಲ. ಕಲೆಯ ಪ್ರದರ್ಶನಕ್ಕೆ ವಾದಕನಿಗೆ ವೇದಿಕೆ ಇದೆ. ಆದರೆ, ತಯಾರಕ ಮಾತ್ರ ಸಮಾಜದ ಅದೆಲ್ಲೋ ಮೂಲೆಯಲ್ಲಿ ಜೀವಿಸುತ್ತಿರುತ್ತಾನೆ. ವಾದ್ಯಗಳನ್ನು ಮಾರಾಟ ಮಾಡುವ ಮಳಿಗೆಗಳೂ ಇದ್ದಾವೆ. ಇಲ್ಲೂ ತಯಾರಕನ ಅಸ್ತಿತ್ವ ಇಲ್ಲ’ ಎಂದು ಅಭಿಪ್ರಾಯಪಟ್ಟರು.

ಚರ್ಚೆಯಲ್ಲಿ ಸುಮಂಗಲಾ ಭಾಗವಹಿಸಿದ್ದರು. ಶೈಲಜಾ ಅವರು ಗೋಷ್ಠಿಯ ಸಮನ್ವಯದ ಜವಾಬ್ದಾರಿ ಹೊತ್ತಿದ್ದರು.

‘ತಯಾರಿಕಾ ಪ್ರಕ್ರಿಯೆ ಕುರಿತೂ ನಿರ್ಲಕ್ಷ್ಯ’

‘ಒಂದು ಕಡೆ ತಯಾರಕರನ್ನು ನಿರ್ಲಕ್ಷಿಸುವುದು. ಇನ್ನೊಂದೆಡೆ ತಯಾರಿಕಾ ಪ್ರಕ್ರಿಯೆಯನ್ನೇ ನಿರ್ಲಕ್ಷಿಸುವುದು. ನಾನು ‘ಸೆಬೆಸ್ಟಿಯನ್‌ ಆ್ಯಂಡ್‌ ಸನ್ಸ್‌’ ಪುಸ್ತಕ ಬರೆದು ಈಗ ಐದು ವರ್ಷವಾಗಿರಬಹುದು. ಈಗಲೂ ಜನ ನನ್ನ ಬಳಿ ಬಂದು ‘ಮೃದಂಗವನ್ನು ಸತ್ತುಬಿದ್ದ ಗೋವಿನ ಚರ್ಮದಿಂದ ಮಾಡುತ್ತಾರೆ’ ಎನ್ನುತ್ತಾರೆ. ಇದಂತು ನೂರಕ್ಕೆ ನೂರು ಸುಳ್ಳು’ ಎಂದು ಗಾಯಕ ಟಿ.ಎಂ. ಕೃಷ್ಣ ಹೇಳಿದರು. ‘ಯಾವುದೇ ಜೀವಿಯು ಸತ್ತ ಬಳಿಕ ರಕ್ತವು ಹೆಪ್ಪು ಗಟ್ಟುತ್ತದೆ. ಚರ್ಮ ಗಟ್ಟಿಯಾಗುತ್ತದೆ. ಗಟ್ಟಿ ಚರ್ಮದಿಂದ ವಾದ್ಯ ತಯಾರಿಸುವುದು ಸಾಧ್ಯವೇ ಇಲ್ಲ. ಈ ಚರ್ಮದಿಂದ ನಾದವೂ ಹೊಮ್ಮುವುದಿಲ್ಲ. ಚರ್ಮದ ಹಿಗ್ಗುವ ಗುಣದ ಕಾರಣದಿಂದಲೇ ವಾದ್ಯ ತಯಾರಿಕೆ ಸಾಧ್ಯ. ಆದ್ದರಿಂದ ಗೋವನ್ನು ಕೊಲ್ಲಲೇ ಬೇಕು. ಅದರಲ್ಲೂ ಹಸುವಿನ ಹೊಟ್ಟೆಯ ಭಾಗದ ಚರ್ಮಕ್ಕೆ ಈ ಗುಣವಿದೆ. ಇಂಥ ಚರ್ಮದಿಂದ ತಯಾರಿಸಿದ ವಾದ್ಯದಿಂದ ಮಾತ್ರವೇ ನಾದ ಹೊಮ್ಮುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.