ADVERTISEMENT

Greater Bengaluru | ಜಾತಿವಾರು ಸಮೀಕ್ಷೆ ವಿಳಂಬ: ಮಧುಸೂದನ್‌

ಆಡಳಿತ ದೃಷ್ಟಿಯಿಂದ ಕೆಲವು ಪ್ರಕ್ರಿಯೆಗಳು ನಡೆದಿರುವುದರಿಂದ ಸ್ವಲ್ಪ ತಡ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 0:10 IST
Last Updated 22 ಸೆಪ್ಟೆಂಬರ್ 2025, 0:10 IST
ಜಿಬಿಎ
ಜಿಬಿಎ   

ಬೆಂಗಳೂರು: ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ವಿಳಂಬವಾಗಿ ಆರಂಭವಾಗಲಿದೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್‌ ಆರ್‌. ನಾಯ್ಕ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಬಿಎ (ಬಿಬಿಎಂಪಿ) ವ್ಯಾಪ್ತಿಯಲ್ಲಿಈಗಾಗಲೇ ಒಂದು ಸುತ್ತಿನ ತರಬೇತಿ ಮುಗಿದಿದ್ದು, ಎರಡನೇ ಸುತ್ತಿನ ತರಬೇತಿ ನಡೆದಿದೆ. ಹೀಗಾಗಿ ಸೋಮವಾರದಿಂದ (ಸೆ. 22) ಸಮೀಕ್ಷೆ ಆರಂಭಿಸಲು ಪ್ರಯತ್ನ ನಡೆದಿದ್ದರೂ ಕೆಲವು ದಿನ ವಿಳಂಬವಾಗುವ ಸಾಧ್ಯತೆ ಇದೆ’ ಎಂದರು.

‘ಇತ್ತೀಚೆಗಷ್ಟೇ ಜಿಬಿಎ ರಚನೆಯಾಗಿದೆ. ಆಡಳಿತ ದೃಷ್ಟಿಯಿಂದ ಕೆಲವು ಪ್ರಕ್ರಿಯೆಗಳು ನಡೆದಿರುವುದರಿಂದ ಸ್ವಲ್ಪ ವಿಳಂಬವಾಗಲಿದೆ. ಬೆಂಗಳೂರಿನಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಆಯ್ದ ಇತರೆ ಇಲಾಖೆಯ ನೌಕರರಿಗೂ ತರಬೇತಿ ನೀಡಿ ಸಮೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ’ ಎಂದೂ ಅವರು ವಿವರಿಸಿದರು.‌

ADVERTISEMENT

ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ ಮಾತನಾಡಿ, ‘ಮೂರು ರೀತಿಯಲ್ಲಿ ಸಮೀಕ್ಷೆಗೆ ವ್ಯವಸ್ಥೆ ಇರಲಿದೆ. ಸಮೀಕ್ಷಕರು ಮನೆ ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲಿದ್ದಾರೆ. ಅನ್ಯಕಾರ್ಯದ ಕಾರಣ ಮನೆಯಿಂದ ಹೊರಗಿದ್ದರೆ ಆಧಾರ್‌ ದೃಡೀಕರಣದ ಮೂಲಕ ಆನ್‌ಲೈನ್‌ನಲ್ಲೂ ಸಮೀಕ್ಷೆಗೆ ದತ್ತಾಂಶ ದಾಖಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

‘ಗಣತಿದಾರರು ಮನೆಗೆ ಭೇಟಿ ನೀಡಿದಾಗ ನಿವಾಸಿಗಳು ಇಲ್ಲದಿದ್ದರೆ ತಮ್ಮ ಮೊಬೈಲ್‌ ಸಂಖ್ಯೆಯ ವಿವರ ಹಂಚಿಕೊಳ್ಳುತ್ತಾರೆ. ಬಳಿಕ ಗಣತಿದಾರರನ್ನು ಸಂಪರ್ಕಿಸಿ ಸಮಯ ಕಾಯ್ದಿರಿಸಿಕೊಂಡು ಸಮೀಕ್ಷೆಗೆ ಮಾಹಿತಿ ನೀಡುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ’ ಎಂದರು.

‘ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಸಲುವಾಗಿ ನಗರವಾಸಿಗಳು ಸಮಯ ಕಾಯ್ದಿರಿಸಿಕೊಂಡು ದತ್ತಾಂಶ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಜಿಬಿಎ ನಿಯಂತ್ರಣ ಕೊಠಡಿ ಸ್ಥಾಪಿಸಿ, ಹೆಚ್ಚುವರಿ ಗಣತಿದಾರರನ್ನು ನಿಯೋಜಿಸಲಾಗುವುದು. ಜನರು ಸಮೀಕ್ಷೆ ದಿನಗಳಲ್ಲಿ ನಿರ್ದಿಷ್ಟ ದಿನಾಂಕ, ನಿರ್ದಿಷ್ಟ ಸಮಯ ಗೊತ್ತುಪಡಿಸಿದರೆ ಆ ಸಮಯಕ್ಕೆ ಸರಿಯಾಗಿ ಗಣತಿದಾರರು ತೆರಳಿ ದತ್ತಾಂಶ ಸಂಗ್ರಹಿಸಲಿದ್ದಾರೆ. ಈ ಸಂಬಂಧ ಸಹಾಯವಾಣಿ ವಿವರವನ್ನು ಜಿಬಿಎ ಆಡಳಿತ ಶೀಘ್ರ ಪ್ರಕಟಿಸಲಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.