ADVERTISEMENT

ಸಮೀಕ್ಷೆ ವಿಳಂಬ ಸಂಭವ: ಜಾತಿ ಹೆಸರಿನ ಮುಂದೆ ‘ಹಿಂದೂ ಕ್ರೈಸ್ತ’ ಉಲ್ಲೇಖಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 0:30 IST
Last Updated 19 ಸೆಪ್ಟೆಂಬರ್ 2025, 0:30 IST
<div class="paragraphs"><p>ಜಾತಿ ಸಮೀಕ್ಷೆ (ಸಾಂದರ್ಭಿಕ ಚಿತ್ರ)</p></div>

ಜಾತಿ ಸಮೀಕ್ಷೆ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆಗಾಗಿ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಜಾತಿ ಪಟ್ಟಿಯಲ್ಲಿ ಹಿಂದೂ ಜಾತಿ ಹೆಸರಿನ ಮುಂದೆ ಕ್ರಿಶ್ಚಿಯನ್ ಪದ, ಹೊಸ ಜಾತಿಗಳ ಉಲ್ಲೇಖದ ಬಗ್ಗೆ ಸಚಿವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಸಚಿವರು, ಈ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಹಲವು ಹೊತ್ತು ಚರ್ಚೆ ನಡೆಯಿತು. ಜಾತಿ ಹೆಸರಿನ ಮುಂದೆ ಕ್ರಿಶ್ಚಿಯನ್ ಪದ ಇರುವ ಪಟ್ಟಿಯನ್ನು ತೆಗೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ADVERTISEMENT

ಜಾತಿ ಪಟ್ಟಿ ಕುರಿತು ಉಂಟಾಗಿರುವ ಗೊಂದಲದ ಬಗ್ಗೆ ಸಭೆ ನಡೆಸಿ ತೀರ್ಮಾನವನ್ನು ತಮಗೆ ತಿಳಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಚ್‌.ಕೆ.ಪಾಟೀಲ, ಎಂ.ಬಿ.ಪಾಟೀಲ ಸೇರಿ ಕೆಲವು ಸಚಿವರಿಗೆ ಜವಾಬ್ದಾರಿ ವಹಿಸಿದರು.

ಸಚಿವ ಸಂಪುಟ ಸಭೆ ಬಳಿಕ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಚ್. ಕೆ. ಪಾಟೀಲ, ಶಿವರಾಜ ತಂಗಡಗಿ, ಜಮೀರ್ ಅಹಮದ್ ಖಾನ್, ಸಂತೋಷ್‌ ಲಾಡ್‌, ದಿನೇಶ್ ಗುಂಡೂರಾವ್, ಬೈರತಿ ಸುರೇಶ್ ಮುಂತಾದವರು ಇದ್ದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್‌ ಆರ್‌. ನಾಯ್ಕ್‌ ಮತ್ತು ಕೆಲವು ಸದಸ್ಯರನ್ನೂ ಸಭೆಗೆ ಆಹ್ವಾನಿಸಲಾಗಿತ್ತು.

ಸಂಪುಟ ಸಭೆಯಲ್ಲಿ ಚರ್ಚೆ: ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ವಿಚಾರವಾಗಿ ಚರ್ಚೆ ನಡೆಯಿತು. ಜಾತಿ ಪಟ್ಟಿಯಲ್ಲಿ 331 ಹೊಸ ಜಾತಿಗಳನ್ನು ಸೇರಿಸಲಾಗಿದೆ. ಹಿಂದೂ ಜಾತಿಗಳ ಹೆಸರಿನ ಜತೆ ಕ್ರಿಶ್ಚಿಯನ್‌ ಎಂದು ಸೇರಿಸಲಾಗಿದೆ. ಇದರ ಅಗತ್ಯ ಏನಿತ್ತು ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ. ಪಾಟೀಲ, ಎಂ.ಬಿ.ಪಾಟೀಲ ಮತ್ತಿತರರು ಪ್ರಶ್ನಿಸಿದರು. ಜಾತಿ ಪಟ್ಟಿಗೆ ಹೊಸ ಹೆಸರುಗಳನ್ನು ಸೇರಿಸುವ ಬಗ್ಗೆ ಸಚಿವ ಸಂಪುಟದ ಗಮನಕ್ಕೆ ತಂದಿಲ್ಲ. ಇದು ಎದುರಾಳಿ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. 

ಸಭೆಗೆ ವಿವರ ನೀಡಿದ ಅಧಿಕಾರಿಗಳು, ‘ಇದನ್ನು ನಾವಾಗಿ ಸೇರಿಸಿದ್ದಲ್ಲ. ಕಾಂತರಾಜ ಆಯೋಗ ನಡೆಸಿದ ಸಮೀಕ್ಷೆ ವೇಳೆ ಕೆಲವರು ತಮ್ಮ ಜಾತಿಯನ್ನು ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಎಂದು ಹೇಳಿದ್ದರು.  ಹೀಗಾಗಿ ಈ ಬಾರಿ ಅವುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರ ಸಂಖ್ಯೆ ಗರಿಷ್ಠ ಒಂದು ಲಕ್ಷ ಇರಬಹುದು. ಇನ್ನೂ ಕೆಲವು ಸಮುದಾಯದವರು ತಮ್ಮ ಜಾತಿಗಳನ್ನು ಸೇರಿಸುವಂತೆ ಆಯೋಗಕ್ಕೆ ಪ್ರತ್ಯೇಕವಾಗಿ ಮನವಿ ಮಾಡಿದ್ದರು. ಆದ್ದರಿಂದ ಆಯೋಗವು ಹೊಸ ಜಾತಿಗಳ ಹೆಸರುಗಳನ್ನು ಸೇರಿಸಿದೆ. ಈ ಬಗ್ಗೆ ಸಮೀಕ್ಷೆ ವೇಳೆ ಮಾಹಿತಿಯನ್ನು ಮಾತ್ರ ಕಲೆ ಹಾಕಲಾಗುತ್ತಿದೆ’ ಎಂದು ಹೇಳಿದರು.

‘ಜಾತಿ ಗಣತಿ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಜೆಪಿ–ಜೆಡಿಎಸ್ ಅಪಪ್ರಚಾರ ಮಾಡುತ್ತಿವೆ.ಈ ಅಪಪ್ರಚಾರ  ಸರ್ಕಾರ ಮತ್ತು ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಗೊಂದಲವನ್ನು ಸರಿಪಡಿಸುವವರೆಗೆ ಸಮೀಕ್ಷೆ ಮುಂದೂಡುವುದು ಸೂಕ್ತ ಎಂದು ಕೆಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದು ಮೂಲಗಳು ತಿಳಿಸಿವೆ.

‘ಹಿಂದೂ ಜಾತಿಗಳ ಜತೆ ಕ್ರಿಶ್ಚಿಯನ್ ಎಂದು ಸೇರಿಸಿರುವುದನ್ನು ಕೈಬಿಡಬೇಕು ಮತ್ತು ಎಲ್ಲ ಕ್ರೈಸ್ತರನ್ನು ಒಂದೇ ಪಟ್ಟಿಗೆ ಸೇರಿಸುವುದು ಸೂಕ್ತ’ ಎಂಬ ಅಭಿಪ್ರಾಯವೂ ಕೇಳಿ ಬಂದಿತು.

ಎಲ್ಲರ ಅಭಿಪ್ರಾಯ ಆಲಿಸಿದ ಸಿದ್ದರಾಮಯ್ಯ, ‘ನಾವು ಸಮೀಕ್ಷೆ ಮಾಡಲಿ, ಬಿಡಲಿ ಪರ– ವಿರೋಧ ಅಭಿಪ್ರಾಯಗಳು ಬರುತ್ತವೆ. ಗಣತಿ ಮಾಡಿದರೆ ನನ್ನನ್ನು ಅಹಿಂದ ಪರ ಮತ್ತು ಪ್ರಬಲ ಜಾತಿಗಳ ವಿರೋಧಿ ಎನ್ನುತ್ತಾರೆ. ಹೀಗಾದರೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಅರಿಯಲು ಸಾಧ್ಯವಿಲ್ಲ’ ಎಂದು ಸಭೆಯಲ್ಲಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಸಾಧಕ‌‌–ಭಾದಕಗಳ ಬಗ್ಗೆ ಆಯೋಗದ ಜೊತೆ ಚರ್ಚೆ ಆಗಿದೆ. ಮುಖ್ಯಮಂತ್ರಿಯವರು ಈ ಬಗ್ಗೆ ತೀರ್ಮಾನಿಸುತ್ತಾರೆ.
– ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ
ನಾವು ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಅಲ್ಲದೆ, ಈಗ ನಾನು ಯಾವುದೇ ಪ್ರತಿಕ್ರಿಯೆ ಕೊಡುವ ಪರಿಸ್ಥಿತಿಯಲ್ಲಿಯೂ ಇಲ್ಲ.
– ಮಧು ಸೂದನ ನಾಯ್ಕ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ

ಸಮೀಕ್ಷೆ ಮುಂದೂಡಲು ಸಚಿವರ ಮನವಿ

‘ಪೂರ್ವಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಿಸಿರುವುದು ಎಲ್ಲ ಗೊಂದಲಗಳಿಗೆ ಕಾರಣವಾಗಿದೆ. ಹೀಗಾಗಿ, ಈ ಸಮೀಕ್ಷೆಯನ್ನು ಮುಂದೂಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರು ಮನವಿ ಮಾಡಿದ್ದಾರೆ. 

ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ಹಿಂದುಳಿದ ಆಯೋಗದ ಪ್ರತಿನಿಧಿಗಳು,  ‘ಜಾತಿಗಳನ್ನು ನಾವು ಸೃಷ್ಟಿ ಮಾಡಿಲ್ಲ. ಹಿಂದಿನ ಆಯೋಗಗಳು ಮಾಡಿದ್ದ ಜಾತಿ ಪಟ್ಟಿಯಲ್ಲಿಯೇ ಈ ರೀತಿಯ ಜಾತಿ ಹೆಸರುಗಳಿವೆ. ಅದನ್ನೇ ಮುಂದುವರಿಸಿದ್ದೇವೆ. ಜನರ ಅಹವಾಲು ಆಲಿಸಿದ ನಂತರ ಸಮೀಕ್ಷೆಗೆ ಜಾತಿ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿದರು.

‘ಹಿಂದೂ ಜಾತಿಗಳ ಹೆಸರಿನ ಜೊತೆ ಕ್ರಿಶ್ಚಿಯನ್ ಪದ ಸೇರಿಸಿದ ಕ್ರಮ ಸರಿಯಲ್ಲ. ಅಧಿಸೂಚನೆ ಹೊರಡಿಸಿ, ಅಧಿಕೃತವಾಗಿ ಪ್ರಕಟಿಸಿದ ಜಾತಿಗಳು ಮಾತ್ರ ಪಟ್ಟಿಯಲ್ಲಿ ಇರಬೇಕು. ಮತಾಂತರಗೊಂಡವರನ್ನೆಲ್ಲ ಪ್ರತ್ಯೇಕ ಕಾಲಂ ಮಾಡಿ ಗುರುತಿಸುವುದು ಒಳಿತು’ ಎಂದು ಕೆಲವು ಸಚಿವರು ಸಲಹೆ ನೀಡಿದರು. ಡಿ.ಕೆ. ಶಿವಕುಮಾರ್‌ ಜೊತೆಗಿನ ಸಭೆಯ ಬಳಿಕ ಸಚಿವ ಶಿವರಾಜ ತಂಗಡಗಿ ಅವರು ಮಧುಸೂದನ್‌ ಆರ್‌. ನಾಯ್ಕ್‌ ಮತ್ತು ಆಯೋಗದ ಸದಸ್ಯರ ಜೊತೆ ಪ್ರತ್ಯೇಕ ಸಭೆ ನಡೆಸಿದರು.

ಎಲ್ಲರಿಗೂ ನ್ಯಾಯ ಒದಗಿಸಲು ಸಮೀಕ್ಷೆ: ಡಿ.ಕೆ. ಶಿವಕುಮಾರ್‌

‘ಸಮೀಕ್ಷೆಯ ಕುರಿತು‌ ಸಾರ್ವಜನಿಕರ ಅಭಿಪ್ರಾಯ ಮತ್ತು ಬಿಜೆಪಿಯವರ ಅಪಪ್ರಚಾರದ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ನಮ್ಮ ಪಕ್ಷ, ನಮ್ಮ ಸರ್ಕಾರವು ಯಾವುದೇ ಸಮಾಜವನ್ನು ವಿಭಜಿಸಲು ಇಚ್ಛಿಸುವುದಿಲ್ಲ. ಎಲ್ಲರಿಗೂ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ಸಮೀಕ್ಷೆ ನಡೆಸುತ್ತಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಸಚಿವರ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಆಯೋಗವು ಕಾನೂನು ಚೌಕಟ್ಟಿನಲ್ಲಿ ಸಮೀಕ್ಷೆ ಮೂಲಕ ಸಾರ್ವಜನಿಕರಿಂದ ಮಾಹಿತಿ ಪಡೆಯಲಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯ ಹೇಳಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಅನೇಕ ಸಮುದಾಯದವರು ತಮಗೆ ಪ್ರತ್ಯೇಕ ಗುರುತು ಬೇಕು ಎಂದು ಕೇಳಿದ್ದಾರೆ. ಆದರೆ, ಈ ಬಗ್ಗೆ ಕೆಲವರು ಆಕ್ಷೇಪ ಸಲ್ಲಿಸಿದ್ದಾರೆ. ನಾವು ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ರಾಜಕೀಯವಾಗಿ ಮಾತನಾಡುವವರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.