ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಲಾಗುತ್ತಿರುವ ದತ್ತಾಂಶ ಸಂರಕ್ಷಣೆಯನ್ನು ಹೇಗೆ ಮಾಡಲಾಗುತ್ತಿದೆ ಎಂಬುದರ ವಿವರಗಳನ್ನು ವಿಸ್ತೃತ ಪ್ರಮಾಣಪತ್ರದ ಮೂಲಕ ಕೋರ್ಟ್‌ಗೆ ಈಗಾಗಲೇ ಸಲ್ಲಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ–1995ರ ಕಲಂ 9ಕ್ಕೆ ತರಲಾಗಿರುವ ತಿದ್ದುಪಡಿ ರದ್ದುಗೊಳಿಸುವಂತೆ ಕೋರಿ ಎಚ್.ಕಾಂತರಾಜ ಸಮಿತಿ ವರದಿಯನ್ನು ಆಕ್ಷೇಪಿಸಿ ಬೀದರ್‌ನ ಶಿವರಾಜ್ ಕಣಶೆಟ್ಟಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ‘ಸಮಾಜ ಸಂಪರ್ಕ ವೇದಿಕೆ’ ಪರ ಹಾಜರಿದ್ದ ಹೈಕೋರ್ಟ್ ವಕೀಲ ಕೆ.ಅಭಿಷೇಕ್, ‘ಕಳೆದ ಸೆಪ್ಟೆಂಬರ್ 25ರಂದು ನಡೆದ ವಿಚಾರಣೆ ವೇಳೆ ನ್ಯಾಯಪೀಠ, ಸಮೀಕ್ಷೆ ಮುಂದುವರಿಕೆಗೆ ಅನುಮತಿಸಿತ್ತು. ಸಂಗ್ರಹಿಸಲಾಗುವ ದತ್ತಾಂಶಗಳ ಸಂರಕ್ಷಣೆಯ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಆಯೋಗಕ್ಕೆ ನಿರ್ದೇಶಿಸಿತ್ತು. ಆದರೆ, ಈತನಕ ಸರ್ಕಾರ ಪ್ರಮಾಣಪತ್ರ ಸಲ್ಲಿಸಿಲ್ಲ ಅಥವಾ ಅದರ ಪ್ರತಿಯನ್ನು ನಮಗೆ ಒದಗಿಸಿಲ್ಲ’ ಎಂದು ಆಕ್ಷೇಪಿಸಿದರು.
ಇದಕ್ಕೆ ನ್ಯಾಯಪೀಠ, ‘ಪ್ರಮಾಣಪತ್ರ ಸಲ್ಲಿಸಲು ಆಯೋಗಕ್ಕೆ ಒಂದು ವಾರ ಕಾಲಾವಕಾಶ ನೀಡಲಾಗಿತ್ತಲ್ಲವೇ? ಪರಿಶೀಲನೆ ನಡೆಸಿ. ಒಂದು ವೇಳೆ ಸಲ್ಲಿಸಿಲ್ಲ ಎಂದಾದರೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ’ ಎಂದು ಅಭಿಷೇಕ್ ಅವರಿಗೆ ಸೂಚಿಸಿತು.
ವಿಡಿಯೊ ಕಾನ್ಫರೆನ್ಸ್ ಮುಖಾಂತರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು, ‘ಪ್ರಮಾಣಪತ್ರ ಸಲ್ಲಿಸಲು ಆಯೋಗಕ್ಕೆ ಹೈಕೋರ್ಟ್ ಒಂದು ದಿನ ಕಾಲಾವಕಾಶ ನೀಡಿತ್ತು. ಅದರಂತೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಅದರ ಪ್ರತಿಯನ್ನು ಅರ್ಜಿದಾರರಿಗೆ ಒದಗಿಸಲಾಗುವುದು’ ಎಂದರು.
ಏತನ್ಮಧ್ಯೆ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ‘ಹಾಲಿ ಸಮೀಕ್ಷೆಯನ್ನು ಪ್ರಶ್ನಿಸಲಾದ ಅರ್ಜಿಗಳ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ನಿಗದಿಪಡಿಸಲಾಗಿದೆ. ಅಂದೇ ಈ ಅರ್ಜಿಗಳನ್ನೂ ವಿಚಾರಣೆಗೆ ನಿಗದಿಪಡಿಸಬಹುದು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿಗಳ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿತು.
ನೇಮಕಾತಿ: ವಿವರ ಒದಗಿಸಲು ನಿರ್ದೇಶನ
‘ಆರೋಗ್ಯ ಕವಚ-108 ಸೇವೆ‘ ಯೋಜನೆಯಡಿ ಹೊಸದಾಗಿ ಚಾಲಕರು (ಪೈಲಟ್) ಹಾಗೂ ತುರ್ತು ಚಿಕಿತ್ಸಾ ತಂತ್ರಜ್ಞರನ್ನು (ಇಎಂಟಿ) ನೇಮಕ ಮಾಡಿಕೊಳ್ಳುವ ತನಕ ಈವರೆಗೆ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನೇ ಮುಂದುವರಿಸಬಹುದಲ್ಲವೇ’ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಹೈಕೋರ್ಟ್, ‘ಯಾವ್ಯಾವ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದೆ ಎಂಬ ಬಗ್ಗೆ ಎರಡು ದಿನಗಳಲ್ಲಿ ಮಾಹಿತಿ ನೀಡಿ’ ಎಂದು ನಿರ್ದೇಶಿಸಿದೆ.
ಈ ಸಂಬಂಧ ‘ಅಖಿಲ ಕರ್ನಾಟಕ 108 ಆ್ಯಂಬುಲೆನ್ಸ್ ನೌಕರರ ಹಿತರಕ್ಷಣಾ ಸಂಘ’ದ ಪ್ರಧಾನ ಕಾರ್ಯದರ್ಶಿ ಮತ್ತಿತರರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠದ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಆದಿತ್ಯ ಸೋಂಧಿ, ‘ಈ ಹಿಂದಿನ ಒಪ್ಪಂದ ರದ್ದುಪಡಿಸಿ ಹೊಸ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಸೇವಾ ಭದ್ರತೆ ಮತ್ತು ಮಾನವೀಯ ದೃಷ್ಟಿಯಿಂದ ಈ ಪ್ರಕರಣವನ್ನು ಪರಿಗಣಿಸಿ, ಬಾಕಿ ವಿಷಯಗಳು ಇತ್ಯರ್ಥವಾಗುವ ತನಕ ನೇಮಕಾತಿ ಅಧಿಸೂಚನೆಗೆ ತಡೆ ನೀಡಬೇಕು’ ಎಂದು ಕೋರಿದರು.
ಇದನ್ನು ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ‘ಜಿಲ್ಲಾವಾರು ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅವರನ್ನೇ ಮುಂದುವರಿಸುವುದಾಗಿ ಸಾರಸಗಟು ಭರವಸೆ ನೀಡಲು ಬರುವುದಿಲ್ಲ. ಏಕೆಂದರೆ, ಈಗ ಸೇವೆಯಲ್ಲಿದ್ದವರೆಲ್ಲ, ಜಿವಿಕೆ-ಇಎಂಆರ್‌ಐ ಸಂಸ್ಥೆಯ ಸಿಬ್ಬಂದಿ’ ಎಂದು ವಿವರಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಈವರೆಗೆ ಯಾವ್ಯಾವ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಆಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು.
‘ತಿಮರೋಡಿ ಏನೆಂಬುದು ಜನಕ್ಕೆ ಗೊತ್ತಿದೆ’
‘ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಹೊರಡಿಸಲಾಗಿರುವ ಆದೇಶದಲ್ಲಿ ಯಾವುದೇ ಕಾನೂನು ಪ್ರಕ್ರಿಯೆಯ ಲೋಪ ಆಗಿಲ್ಲ. ಸೌಜನ್ಯ ಚಳವಳಿ ಹೆಸರಲ್ಲಿಅವರು ಏನು ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ’ ಎಂದು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದರು.
ತಮ್ಮನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ತಿಮರೋಡಿ ಪರ ಪದಾಂಕಿತ ಹಿರಿಯ ವಕೀಲ ತಾರಾನಾಥ ಪೂಜಾರಿ ‘ನಮ್ಮ ಅರ್ಜಿದಾರರ ವಿರುದ್ಧ ಹೊರಡಿಸಲಾಗಿರುವ ಆದೇಶದಲ್ಲಿ ವ್ಯಾಪಕ ಕಾನೂನು ಪ್ರಕ್ರಿಯೆಯ ಲೋಪಗಳಿವೆ’ ಎಂದು ಆರೋಪಿಸಿದರು.
‘ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ತಿಮರೋಡಿ ವಿರುದ್ಧದ ಭಾವನೆ ಹೊಂದಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂಬುದರ ಕುರಿತಾದ ಯಾವುದೇ ವಿವರಗಳನ್ನು ಸಮರ್ಪಕವಾಗಿ ಒದಗಿಸಿಲ್ಲ. ಈಗಾಗಲೇ ಸುಮಾರು 10 ಪ್ರಕರಣಗಳಲ್ಲಿ ಅವರ ವಿರುದ್ಧ ತನಿಖಾಧಿಕಾರಿಗಳು ಬಿ ಅಂತಿಮ ವರದಿ ಸಲ್ಲಿಸಿದ್ದಾರೆ. ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೊಂಬಿ ಮಾಡಿ ಗಲಾಟೆ ನಡೆಸುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ. ಆದರೆ ಇದಕ್ಕೆ ಸಾಕ್ಷಿಗಳೇ ಇಲ್ಲ’ ಎಂದು ಆಕ್ಷೇಪಿಸಿದರು.
ಇದನ್ನು ಬಲವಾಗಿ ಅಲ್ಲಗಳೆದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ‘ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಹೇಳುತ್ತಿರುವ ವಿವರಗಳು ಸರಿಯಲ್ಲ. ಸ್ಥಳೀಯ ನಿವಾಸಿಯಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಚಳವಳಿ ಹೆಸರಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಸರ್ಕಾರ ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ’ ಎಂದು ವಿವರಿಸಿದರು.
ಸುದೀರ್ಘ ವಾದ–ಪ್ರತಿವಾದಿ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿರುವುದಾಗಿ ತಿಳಿಸಿತು. ಅಂತೆಯೇ ಗಡಿಪಾರು ಆದೇಶಕ್ಕೆ ಸಂಬಂಧಿಸಿದಂತೆ ತಿಮರೋಡಿ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.