ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಾರು ವಿರೋಧಿಸುತ್ತಿದ್ದಾರೊ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗಪಡಿಸಬೇಕು’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘75 ವರ್ಷಗಳಿಂದ ಕೆಲವರು ಮಾತ್ರ ತುಪ್ಪ-ಬೆಣ್ಣೆ ತಿಂದಿದ್ದಾರೆ. ಈಗ ತಮ್ಮ ಪಾಲು ಎಲ್ಲಿ ತಪ್ಪಿ ಹೋಗುವುದೋ ಎಂಬ ಭಯದಿಂದ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ’ ಎಂದರು.
‘ಜಾತಿಯ ಹೆಸರಿನಲ್ಲಿ ಸಾಮ್ರಾಜ್ಯ ಕಟ್ಟಿಕೊಂಡವರಿಗೆ ಈಗ ತೊಂದರೆಯಾಗುತ್ತದೆ ಎಂದು ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೇ ಈ ಸಮೀಕ್ಷೆ ಬಗ್ಗೆ ಘೋಷಿಸಿದ್ದೆವು. ಆಗ ವಿರೋಧಿಸಿದವರು ಈಗೇಕೆ ವಿರೋಧಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
‘ಈ ಸಮೀಕ್ಷೆ ನಡೆಸಬೇಕೆಂದು ರಾಹುಲ್ ಗಾಂಧಿಯವರೇ ತೀರ್ಮಾನಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಸಮೀಕ್ಷೆಗೆ ಹಸಿರುನಿಶಾನೆ ತೋರಿಸಿದ್ದಾರೆ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ, ಯಾರು ಬೇಕಾದರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ನಾವು ನಾಗಪುರದವರಲ್ಲ’ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಪರೋಕ್ಷವಾಗಿ ಟೀಕಿಸಿದರು.
ಪ್ರಧಾನಿಯಿಂದ ಬೊಗಳೆ:
‘ಪ್ರಧಾನಿ ಮೋದಿಯವರು ಜಿಎಸ್‌ಟಿ ಬಗ್ಗೆ ಕ್ಷಮೆ ಕೇಳುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ, ಅವರು ಬೊಗಳೆ ಬಿಡುತ್ತಿದ್ದಾರೆ. ಈ ಸಂಭ್ರಮಾಚರಣೆಯು ಬಿಹಾರ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಲಾಗಿದೆ’ ಎಂದು ದೂರಿದರು.
‘ಎಂಟು ವರ್ಷಗಳ ಕಾಲ ಬಡವರ ರಕ್ತ ಕುಡಿದು, ಅವರ ಬೆನ್ನುಮೂಳೆ ಮುರಿದವರು ಈಗ ಜಿಎಸ್‌ಟಿ ದರ ಇಳಿಸಿದ್ದಕ್ಕೆ ಉತ್ಸವ ಆಚರಿಸುತ್ತಿದ್ದಾರೆ. ಇದು ಅತ್ಯಂತ ಹಾಸ್ಯಾಸ್ಪದ, ಇವರದ್ದು ವಿಕೃತ ಮನಸ್ಸು’ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.