ADVERTISEMENT

ಜಾತಿಗಳ ‘ಹಿಂದುಳಿದಿರುವಿಕೆ’ ಅಂಕ ಬಹಿರಂಗ

ಸಚಿವರ ಕೈಗೆ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ವಿವರ, 18 ಗುಣಲಕ್ಷಣಗಳ ಪಟ್ಟಿ

ರಾಜೇಶ್ ರೈ ಚಟ್ಲ
Published 14 ಮೇ 2025, 0:30 IST
Last Updated 14 ಮೇ 2025, 0:30 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದ್ದ ಸಮೀಕ್ಷೆ (ಜಾತಿ ಜನಗಣತಿ) ಸಂದರ್ಭದಲ್ಲಿ ಪ್ರತಿ ಜಾತಿಯ ಸಾಮಾಜಿಕ, ಶೈಕ್ಷಣಿಕ ಮತ್ತು ಜೀವನೋಪಾಯ ಈ ಮೂರು ಸೂಚಕಗಳನ್ನು ಮಾನದಂಡವಾಗಿ ಪರಿಗಣಿಸಿ ಜಾತಿಗಳ ‘ಹಿಂದುಳಿದಿರುವಿಕೆ’ಯನ್ನು ಗುರುತಿಸಿದೆ. ಅದರ ಆಧಾರದಲ್ಲಿ ಪ್ರವರ್ಗವಾರು ಜಾತಿಗಳ ಮರು ವರ್ಗೀಕರಣ ಮಾಡಿದೆ.

ADVERTISEMENT

ಪ್ರತಿಯೊಂದು ಜಾತಿಯ ಒಟ್ಟು ಜನಸಂಖ್ಯೆ, ಈ ಮೂರು ಮಾನದಂಡಗಳಿಗೆ ನಿಗದಿಪಡಿಸಿದ್ದ ಒಟ್ಟು 200 ಅಂಕಗಳಲ್ಲಿ ಜಾತಿಗಳು ಗಳಿಸಿದ ಅಂಕಗಳ ವಿವರಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಎಲ್ಲ ಸಚಿವರಿಗೆ ನೀಡಿದೆ. ಈ ವಿವರಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಮಾನದಂಡಗಳಿಗೆ ನಿಗದಿಪಡಿಸಿದ್ದ 200ರಲ್ಲಿ 90ಕ್ಕಿಂತ ಹೆಚ್ಚು ಅಂಕ ಪಡೆದ ಜಾತಿಗಳನ್ನು ‘ಅತ್ಯಂತ ಹೆಚ್ಚು ಹಿಂದುಳಿದಿದೆ’ ಎಂದು ನಿರ್ಧರಿಸಿ, ‘ಪ್ರವರ್ಗ 1’ರಲ್ಲಿ ಆಯೋಗ ಪಟ್ಟಿ ಮಾಡಿದೆ. ಈ ಪೈಕಿ ಉಪ್ಪಾರ 134.88 ಅಂಕ ಪಡೆದರೆ, ಬೆಸ್ತ 129.45, ಕುರುಬ 123.50, ಅಗಸ 120.76, ಕುಂಬಾರ 111.09 ಅಂಕ ಪಡೆದಿವೆ. ಹೀಗಾಗಿ, ಈ ಜಾತಿಗಳನ್ನು ‘ಅತ್ಯಂತ ಹಿಂದುಳಿದ’ (ಪ್ರವರ್ಗ 1) ಪಟ್ಟಿಯಲ್ಲಿ ಸೇರಿಸಲಾಗಿದೆ. ಒಕ್ಕಲಿಗರು 42.60 ಅಂಕ, ಲಿಂಗಾಯತ/ ವೀರಶೈವ ಸಮುದಾಯ 41.58 ಅಂಕ ಪಡೆದ ಕಾರಣ ‘ಹಿಂದುಳಿದ’ (ಪ್ರವರ್ಗ 3) ಎಂದು ಪಟ್ಟಿ ಮಾಡಲಾಗಿದೆ ಎಂದು ಆಯೋಗವು ವರದಿಯಲ್ಲಿ ಸಮರ್ಥನೆ ನೀಡಿದೆ. 

ಪ್ರತಿ ಜಾತಿಯ ಒಟ್ಟು ಕುಟುಂಬಗಳೆಷ್ಟು, ಜಾತಿವಾರು ಜನಸಂಖ್ಯೆಯಲ್ಲಿ ಪುರುಷರೆಷ್ಟು, ಮಹಿಳೆಯರೆಷ್ಟು, ಲೈಂಗಿಕ ಅಲ್ಪಸಂಖ್ಯಾತರೆಷ್ಟು, ಎಷ್ಟು ಮಂದಿ ಯಾವ ಭಾಷೆ ಮಾತನಾಡುತ್ತಾರೆ, ಆಧಾರ್, ಮತದಾರರ ಗುರುತಿನ ಚೀಟಿ, ಬ್ಯಾಂಕ್‌ ಖಾತೆ ಹೊಂದಿರುವವರೆಷ್ಟು, ಮದುವೆಯಾದವರು, ವಿಧವೆಯವರು, ವಿದುರರು ಎಷ್ಟು, ಶಿಕ್ಷಣ ಪಡೆದವರೆಷ್ಟು, ಸಾಕ್ಷರತಾ ಮಟ್ಟ, ಉದ್ಯೋಗಿಗಳು, ನಿರುದ್ಯೋಗಿಗಳು, ಸಾಂಪ್ರದಾಯಿಕ ವೃತ್ತಿ, ಭೂಮಿ ಹೊಂದಿದವರು, ಸಾಮಾಜಿಕ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯುವವರು, ವಸತಿರಹಿತರೆಷ್ಟು, ವಸತಿ ಇದ್ದರೆ ಎಂತಹ ಮನೆ, ಅಡುಗೆ ವಿಧಾನ ಹೀಗೆ ಪ್ರತಿಯೊಂದು ಜಾತಿಯ 18 ಗುಣಲಕ್ಷಣಗಳನ್ನು ಪಟ್ಟಿ ಮಾಡಿ ತಲಾ ಮೂರು ಪುಟಗಳಲ್ಲಿ ಸಚಿವರಿಗೆ ನೀಡಲಾಗಿದೆ.

ಜಾತಿಗಳ ಸಾಮಾಜಿಕ ಸ್ಥಿತಿಗೆ 100 ಅಂಕ, ಶಿಕ್ಷಣಕ್ಕೆ 68, ಜೀವನೋಪಾಯಕ್ಕೆ 32 ಅಂಕ ಹೀಗೆ ಒಟ್ಟು 200 ಅಂಕಗಳಲ್ಲಿ ಹಿಂದುಳಿದಿರುವಿಕೆಯನ್ನು ನಿರ್ಧರಿಸಲಾಗಿದೆ. ಅಂಕಗಳ ವ್ಯಾಪ್ತಿಯು 12ರಿಂದ 147 ಆಗಿದ್ದು, 90 ಅಂಕವನ್ನು ಕಟ್‌ ಆಫ್‌ ಎಂದು ತೆಗೆದುಕೊಂಡು, 90ಕ್ಕಿಂತ ಹೆಚ್ಚು ಅಂಕ ಪಡೆದ ಜಾತಿಗಳು ‘ಅತ್ಯಂತ ಹಿಂದುಳಿದ’ (ಪ್ರವರ್ಗ 1), 50ರಿಂದ 89 ಅಂಕ ಪಡೆದ ಜಾತಿಗಳು ‘ಅತಿ ಹಿಂದುಳಿದ’ (ಪ್ರವರ್ಗ 2), 20ರಿಂದ 49 ಅಂಕ ಪಡೆದ ಜಾತಿಗಳನ್ನು ‘ಹಿಂದುಳಿದ’ (ಪ್ರವರ್ಗ 3) 20ಕ್ಕಿಂತ ಕಡಿಮೆ ಅಂಕ ಪಡೆದ ಜಾತಿಗಳನ್ನು ‘ಸಾಮಾನ್ಯ’ ಎಂದು ಆಯೋಗ ಪಟ್ಟಿ ಮಾಡಿದೆ.

ಪ್ರವರ್ಗವಾರು ವರ್ಗೀಕರಣ

*ಪ್ರವರ್ಗ 1ಎ: ಸಾಮಾಜಿಕ, ಶೈಕ್ಷಣಿಕ, ಜೀವನೋಪಾಯ ಮಾನದಂಡಗಳಲ್ಲಿ ಒಟ್ಟು 200 ಅಂಕಗಳಲ್ಲಿ 125 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ಜಾತಿಗಳು (ಅಲೆಮಾರಿ, ಅರೆ ಅಲೆಮಾರಿಗಳು ಸೇರಿದಂತೆ)

*ಪ್ರವರ್ಗ 1ಬಿ: 90ರಿಂದ 124 ಅಂಕಗಳನ್ನು ಪಡೆದ ಜಾತಿಗಳು (ಈಗಾಗಲೇ ಪ್ರವರ್ಗ 1ರಲ್ಲಿ ನಮೂದಾಗಿರುವ ಜಾತಿಗಳು)

*ಪ್ರವರ್ಗ 2ಎ: 50ರಿಂದ 89 ಅಂಕಗಳನ್ನು ಪಡೆದ ಜಾತಿಗಳು (ಈಗಾಗಲೇ ‌ಪ್ರವರ್ಗ 2ಎಯಲ್ಲಿ ನಮೂದಾಗಿರುವ ಜಾತಿಗಳು)

*ಪ್ರವರ್ಗ 2ಬಿ: ಮುಸ್ಲಿಂ ಮತ್ತು ಅದರ ಉಪ ಜಾತಿಗಳು

*ಪ್ರವರ್ಗ 3ಎ: 20ರಿಂದ 49 ಅಂಕಗಳನ್ನು ಪಡೆದ ಜಾತಿಗಳು (ಈಗಾಗಲೇ ಪ್ರವರ್ಗ 3ಎಯಲ್ಲಿ ನಮೂದಾಗಿರುವ ಜಾತಿಗಳು)

*ಪ್ರವರ್ಗ 3ಬಿ: 20ರಿಂದ 49 ಅಂಕಗಳನ್ನು ಪಡೆದ ಜಾತಿಗಳು (ಈಗಾಗಲೇ ಪ್ರವರ್ಗ 3ಬಿಯಲ್ಲಿ ನಮೂದಾಗಿರುವ ಜಾತಿಗಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.