ADVERTISEMENT

ಡಿಸೆಂಬರ್‌ನಲ್ಲಿ ಜಾತಿವಾರು ಸಮೀಕ್ಷೆ ವರದಿ ಸಲ್ಲಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 23:55 IST
Last Updated 12 ಸೆಪ್ಟೆಂಬರ್ 2025, 23:55 IST
<div class="paragraphs"><p>ಸಿದ್ದರಾಮಯ್ಯ&nbsp;, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ , ಮುಖ್ಯಮಂತ್ರಿ

   

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇದೇ 22 ರಂದು ಆರಂಭಗೊಂಡು ಅ.7 ರವರೆಗೆ ನಡೆಯಲಿದ್ದು, ಡಿಸೆಂಬರ್‌ನಲ್ಲಿ ವರದಿ ಸಲ್ಲಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

‘ಈ ಬಾರಿ ಸಮೀಕ್ಷೆಯಲ್ಲಿ ಎಲ್ಲ ಕುಟುಂಬಗಳು ಭಾಗವಹಿಸಬೇಕು. ಯಾರೊಬ್ಬರೂ ತಪ್ಪಿಸಿಕೊಳ್ಳಬಾರದು’ ಎಂದು ಅವರು ಶುಕ್ರವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಮೀಕ್ಷಾ ಕೈಪಿಡಿ ಬಿಡುಗಡೆ ಮಾಡಿ ಮನವಿ ಮಾಡಿದರು.

ADVERTISEMENT

ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾವಳಿ ಇರುತ್ತದೆ. ಅದರಲ್ಲಿ ಪ್ರತಿ ಸದಸ್ಯರ ಧರ್ಮ, ಜಾತಿ, ಉಪಜಾತಿ, ವಿದ್ಯಾರ್ಹತೆ, ಕುಲಕಸುಬು ಕೌಶಲ್ಯ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳನ್ನು ಸಂಗ್ರಹಿಸಲಾಗುವುದು. ಈಗಾಗಲೇ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸುವ ಕೆಲಸ ನಡೆದಿದೆ. ರಾಜ್ಯದ 2 ಕೋಟಿ ಮನೆಗಳ ಪೈಕಿ ಈವರೆಗೆ 1.55 ಕೋಟಿ ಮನೆಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ ಎಂದರು.

ಶಿಕ್ಷಕರು ಮನೆಗೆ ಸಮೀಕ್ಷೆ ಬರುವುದಕ್ಕೆ ಮೂರು ದಿನಗಳ ಮೊದಲೇ ಆಶಾ ಕಾರ್ಯಕರ್ತೆಯರು ಪ್ರಶ್ನಾವಳಿಗಳನ್ನು ವಿತರಿಸುತ್ತಾರೆ. ಇದರಿಂದ ಮನೆಯ ಸದಸ್ಯರು ಎಲ್ಲ ಪ್ರಶ್ನೆಗಳನ್ನು ಓದಿಕೊಂಡು ಉತ್ತರಿಸಲು ಸಹಾಯಕವಾಗುತ್ತದೆ. ಪ್ರಶ್ನೆಗಳನ್ನು ಓದಲು ಬಾರದಿದ್ದವರು ಬೇರೆಯವರ ಸಹಾಯ ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕು. ಅದಕ್ಕಾಗಿ ಪ್ರತಿಯೊಂದು ಕುಟುಂಬಗಳೂ ತಯಾರಿರಬೇಕು. ಆಶಾ ಕಾರ್ಯಕರ್ತೆಯರು ಶನಿವಾರದಿಂದಲೇ (ಸೆ.13) ಪ್ರಶ್ನಾವಳಿ ವಿತರಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಒಂದು ವೇಳೆ ಯಾರಿಗಾದರೂ ಸಮೀಕ್ಷೆಯಲ್ಲಿ ಭಾಗವಹಿಸಲು ಆಗದಿದ್ದರೆ ಅಥವಾ ಮನೆಯಲ್ಲಿ ಇಲ್ಲದೇ ಇದ್ದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಮತ್ತು ವೈಬ್‌ಸೈಟ್‌ನಲ್ಲಿ ಸಮೀಕ್ಷೆಯ ಮೂಲಕ ಪ್ರಶ್ನೆಗಳಿಗೆ ಉತ್ತರ ನೀಡಿ ಸಮೀಕ್ಷೆಯಲ್ಲಿ ಭಾಗವಹಿಸಬಹುದು ಎಂದರು.

ದಸರಾ ರಜೆ ಸೆಪ್ಟೆಂಬರ್‌ 22 ರಿಂದ ಆರಂಭವಾಗುತ್ತದೆ. ಸಮೀಕ್ಷೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ. ಸುಮಾರು 1.75 ಲಕ್ಷ ಶಿಕ್ಷಕರು ಭಾಗವಹಿಸಲಿದ್ದಾರೆ. ಈ ಕಾರ್ಯದಲ್ಲಿ ಭಾಗವಹಿಸುವ ಶಿಕ್ಷಕರಿಗೆ ₹20,000 ದವರೆಗೆ ಸಂಭಾವನೆ ನೀಡಲಾಗುತ್ತದೆ. ಇದಕ್ಕಾಗಿ ₹325 ಕೋಟಿ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಗೇಟೆಡ್‌ ಕಮ್ಯುನಿಟಿ ಮತ್ತು ಅಪಾರ್ಟ್‌ಮೆಂಟ್‌ಗಳಿಗೂ ಸಮೀಕ್ಷೆಗೆ ಹೋಗುತ್ತಾರೆ. ಅವರೂ ಸಹಕರಿಸಬೇಕು. ಒಂದು ವೇಳೆ ಹೇಳಲು ಸಾಧ್ಯವಾಗದಿದ್ದರೆ, ಆನ್‌ಲೈನ್ ಮೂಲಕ ಮಾಹಿತಿ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್‌ ಆರ್.ನಾಯ್ಕ್ ಇದ್ದರು.

ಸಮೀಕ್ಷೆಗೆ ವಿನೂತನ ವಿಧಾನ

ಈ ಸಮೀಕ್ಷೆಯಲ್ಲಿ ಎಲ್ಲಾ ಕುಟುಂಬಗಳು ಪೂರ್ಣವಾಗಿ ಒಳ್ಳಗೊಳ್ಳಬೇಕು ಎಂಬ ಕಾರಣಕ್ಕಾಗಿ ವಿನೂತನ ಸಮೀಕ್ಷಾ ವಿಧಾನ ಅನುಸರಿಸಲಾಗುತ್ತಿದೆ. ರಾಜ್ಯದ ಬಹುಪಾಲು ಮನೆಗಳು ವಸತಿ ಉದ್ದೇಶದ ವಿದ್ಯುತ್ ಸಂಪರ್ಕ ಹೊಂದಿದ್ದು, ಅವುಗಳಿಗೆ  ಆರ್‌.ಆರ್‌ ಸಂಖ್ಯೆ ಹೊಂದಿರುವ ಎಲೆಕ್ಟ್ರಿಕ್‌ ಮೀಟರ್‌ಗಳು ಇರುತ್ತವೆ. ಈ ಮಾಹಿತಿ ಆಧರಿಸಿ ಮನೆಗಳ ಪಟ್ಟಿಯನ್ನು ತಯಾರಿಸಲಾಗಿದೆ. ಹೀಗಾಗಿ ಎಲ್ಲ ಮನೆಗಳು ಮತ್ತು ಕುಟುಂಬಗಳು ಈ ಜಾಲದಲ್ಲಿ ಬಂದಿವೆ. ವಿದ್ಯುತ್ ಸಂಪರ್ಕ ಹೊಂದಿರದ ಮನೆಗಳನ್ನೂ ಪ್ರತ್ಯೇಕ ವಿಧಾನದಿಂದ ಸಮೀಕ್ಷೆಗೆ ಒಳಪಡಿಸಲಾಗುವುದು. ವಿದ್ಯುತ್‌ ಸಂಪರ್ಕವಿಲ್ಲದ ಮನೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿಗಳನ್ನು ಬಳಸಿ ಅಂತಹ ಮನೆಗಳನ್ನು ಜಿಯೋಟ್ಯಾಗ್‌ ಮಾಡಿ, ಸಮೀಕ್ಷಾ ಬ್ಲಾಕ್‌ಗಳನ್ನು ರಚಿಸಲಾಗಿದೆ. ಈ ಮೂಲಕ 2 ಕೋಟಿ ಕುಟುಂಬಗಳ 7 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳ‍ಪಡಿಸಲಾಗುವುದು.

‘ಗ್ಯಾರಂಟಿ’ ಮಾಹಿತಿಯೂ ಸಂಗ್ರಹ

ಯಾವುದೇ ಕುಟುಂಬ ಸರ್ಕಾರದಿಂದ ಪಡೆದ ಸವಲತ್ತು, ಎಂದರೆ ಗಂಗಾ ಕಲ್ಯಾಣ, ಭೂಒಡೆತನ, ಸ್ವಾವಲಂಬಿ ಸಾರಥಿ, ಪ್ರೇರಣಾ ಯೋಜನೆ(ಕಿರುಸಾಲ), ಸ್ವಯಂ ಉದ್ಯೋಗ(ನೇರ ಸಾಲ), ಕೈಗಾರಿಕಾ ನಿವೇಶನ, ಕೈಗಾರಿಕೆ ಸ್ಥಾಪಿಸಲು ನೆರವು. ಕೃಷಿ ಸಂಬಂಧಿತ ನೆರವು, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗಲ ವಿಕಲ ವೇತನದ ಜತೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಮಾಹಿತಿ ನೀಡಬೇಕು. ಇದರಿಂದ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುತ್ತಿದೆಯೆ ಎಂಬ ಮಾಹಿತಿ ಸಿಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಆಧಾರ್‌ ಲಿಂಕ್ ಕಡ್ಡಾಯ

ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳು ಯಾವ ಮೊಬೈಲ್‌ ನಂಬರ್‌ಗಳಿಗೆ ಲಿಂಕ್‌ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆಧಾರ್‌ ಕಾರ್ಡ್‌ ಸಂಖ್ಯೆಗೆ ಈಗ ಬಳಸುತ್ತಿರುವ ಮೊಬೈಲ್‌ ಸಂಖ್ಯೆ ಲಿಂಕ್‌ ಆಗಿರದಿದ್ದಲ್ಲಿ ಲಿಂಕ್‌ ಮಾಡಿಕೊಳ್ಳಬೇಕು. ಮುಖ್ಯವಾಗಿ ಕುಟುಂಬದ ಯಾವುದಾದರೂ ಒಬ್ಬ ಸದಸ್ಯರ 1 ಮೊಬೈಲ್‌ ಸಂಖ್ಯೆಗೆ ಆ ಕುಟುಂಬದ 9 ಸದಸ್ಯರ ಆಧಾರ್‌ ಕಾರ್ಡ್‌ ಸಂಖ್ಯೆಗಳನ್ನು ಲಿಂಕ್ ಮಾಡಲು ಅವಕಾಶವಿದೆ. ಸಹಾಯವಾಣಿ: 8050770004 ವೆಬ್‌ಸೈಟ್‌: https://kscbc.karnataka.gov.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.