ಬೆಂಗಳೂರು: ಮೇಲ್ಜಾತಿಗಳನ್ನು ತುಳಿಯಲು ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಆರೋಪ ಬಾಲಿಶವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ ಅವರು, ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸದಿದ್ದರೆ, ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ. ಈ ಸಮೀಕ್ಷೆಯಲ್ಲಿ ಯಾವ ಜಾತಿಯವರನ್ನು ತುಳಿಯುವ ಪ್ರಶ್ನೆಯಿಲ್ಲ. ಸಮಸಮಾಜ ನಿರ್ಮಾಣವನ್ನು ವಿರೋಧಿಸುವವರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ.
ಈಗಾಗಲೇ 1.10 ಕೋಟಿ ಕುಟುಂಬಗಳ ಸಮೀಕ್ಷಾ ಕಾರ್ಯ ಮುಗಿದಿದ್ದು, ನಿನ್ನೆವರೆಗೆ ಶೇ 63ರಷ್ಟು ಸರ್ವೇ ಕಾರ್ಯ ಪ್ರಗತಿಯಾಗಿದೆ. ನಾಳೆ ಸಂಜೆವರೆಗೆ ಸಮೀಕ್ಷೆಯ ಪ್ರಗತಿಯನ್ನು ಪರಿಶೀಲಿಸಿ, ಸಮೀಕ್ಷೆ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಮೇಲ್ಜಾತಿಗಳನ್ನು ತುಳಿಯುವ ಸಲುವಾಗಿ ಜಾತಿವಾರು ಸಮೀಕ್ಷೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ತಕ್ಷಣವೇ ಈ ಸಮೀಕ್ಷೆಯನ್ನು ನಿಲ್ಲಿಸಬೇಕು ಎಂದು ಸೋಮಣ್ಣ ಆಗ್ರಹಿಸಿದ್ದರು. ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ್ದ ಅವರು, ‘ಮೇಲ್ಜಾತಿ ಅಥವಾ ಯಾವುದೋ ಜಾತಿಗಳನ್ನು ತುಳಿಯುವ ಸಲುವಾಗಿ ಇಷ್ಟೆಲ್ಲಾ ಅಸಹ್ಯಕರವಾದ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ಸಮೀಕ್ಷೆ ಬಗ್ಗೆ ಅಧಿಕಾರಿಗಳಿಗೇ ಪೂರ್ಣ ಮಾಹಿತಿ ಇಲ್ಲ. ಇದು ಇನ್ನೊಂದು ಕಾಂತರಾಜ ಆಯೋಗದ ಸಮೀಕ್ಷೆಯಂತಾಗುತ್ತದೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಹೇಳಿದ್ದರು.
ಕೊಪ್ಪಳ ಜಿಲ್ಲೆಯಲ್ಲಿ ಶೇ 97 ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಇದು ಒಳ್ಳೆಯ ಬೆಳವಣಿಗೆ. ಸಮಾಜದಲ್ಲಿ ಬದಲಾವಣೆಯನ್ನು ವಿರೋಧಿಸುವವರು ಸಮೀಕ್ಷೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಲಿಂಗಾಯತ ಧರ್ಮದ ವಿಷಯದಲ್ಲಿ ಜನರು ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ತಿಳಿಸಿದಂತೆ ಸಮೀಕ್ಷಾಗಾರರು ಧರ್ಮವನ್ನು ನಮೂದಿಸಿಕೊಳ್ಳುತ್ತಾರೆ. ಈ ಬಗ್ಗೆ ಜನರ ನಿಲುವೇ ನನ್ನ ನಿಲುವು ಎಂದು ಎಕ್ಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಬಲ್ಡೋಟಾ ಕಾರ್ಖಾನೆ ಯೋಜನೆ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಸಿಎಂ ಈ ವಿಚಾರ ನ್ಯಾಯಾಲಯದಲ್ಲಿ ಇದ್ದು, ತೀರ್ಪಿನ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.