ADVERTISEMENT

ಜಾತಿವಾರು ಸಮೀಕ್ಷೆಯಿಂದ ಪೋಡಿ ದುರಸ್ತಿ ಕಾರ್ಯಕ್ಕೆ ಹಿನ್ನಡೆ: ಸಚಿವ ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 16:08 IST
Last Updated 10 ನವೆಂಬರ್ 2025, 16:08 IST
 ಕೃಷ್ಣಬೈರೇಗೌಡ
 ಕೃಷ್ಣಬೈರೇಗೌಡ   

ಬೆಂಗಳೂರು: ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆ ಮತ್ತು ಅತಿವೃಷ್ಟಿ ಕಾರಣದಿಂದಾಗಿ ಪೋಡಿ ದುರಸ್ತಿ ಕೆಲಸಕ್ಕೆ ಹಿನ್ನಡೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ವಿಡಿಯೊ ಸಂವಾದದ ಮೂಲಕ ತಹಶೀಲ್ದಾರ್‌ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

‘ಪೋಡಿ ದುರಸ್ತಿಗಾಗಿ 1.40 ಲಕ್ಷ ಪ್ರಕರಣಗಳು ಸರ್ವೇಗೆ ಹೋಗಿವೆ. ಇನ್ನೂ 1.50 ಲಕ್ಷ ಪ್ರಕರಣಗಳು ಮಿಸ್ಸಿಂಗ್ ರೆಕಾರ್ಡ್‌ ಕಮಿಟಿಗೆ ಹೋಗಿವೆ. 20 ಸಾವಿರ ಸರ್ವೇ ನಂಬರ್‌ನಲ್ಲಿ ಮಂಜೂರುದಾರರ ಸಂಖ್ಯೆ 1 ಲಕ್ಷದಿಂದ 1.50 ಲಕ್ಷ ಇರುವ ಸಾಧ್ಯತೆ ಇದೆ. ಎಲ್ಲ ತಾಲ್ಲೂಕಿನಲ್ಲೂ ಮಂಜೂರುದಾರರಿದ್ದಾರೆ’ ಎಂದರು.

ADVERTISEMENT

ಆಧಾರ್ ಸೀಡಿಂಗ್ ಪ್ರಕ್ರಿಯೆ ಕಾರ್ಕಳದಲ್ಲಿ ಶೇ 78, ಬೆಂಗಳೂರು ದಕ್ಷಿಣ ಶೇ 75, ಆನೇಕಲ್‌ ಶೇ 68, ದೇವನಹಳ್ಳಿ ಶೇ 71, ಹೆಬ್ರಿಯಲ್ಲಿ ಶೇ 46 ರಷ್ಟಾಗಿದೆ. ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಆಧಾರ್ ಸೀಡಿಂಗ್ ಬಹುಮುಖ್ಯ. ಆದಷ್ಟು ಬೇಗ ಎಲ್ಲ ತಾಲ್ಲೂಕುಗಳಲ್ಲೂ ಆಧಾರ್‌ ಸೀಡಿಂಗ್‌ ಕಾರ್ಯ ಮುಗಿಸುವಂತೆ ಅವರು ಸೂಚನೆ ನೀಡಿದರು.

ಪೌತಿ ಖಾತೆ ಅಭಿಯಾನ ತಕ್ಕಮಟ್ಟಿಗೆ ನಡೆಯುತ್ತಿದೆ. 41,62,000 ಗುರಿ ಇದೆ. ಈ ಪೈಕಿ 2 ಲಕ್ಷ ಪ್ರಕರಣಗಳಲ್ಲಿ ಮೃತರ ಹೆಸರಿನಲ್ಲಿದ್ದ ಜಮೀನನ್ನು ಈಗಿನ ಮಾಲೀಕರ ಹೆಸರಿಗೆ ಬದಲಿಸಲಾಗಿದೆ. ಒಟ್ಟು ಗುರಿಯ ಪೈಕಿ ಶೇ 5 ರಷ್ಟು ಕೆಲಸ ಆಗಿದೆ ಎಂದು ಅವರು ಹೇಳಿದರು.

‘ವಿರಾಜಪೇಟೆ, ಬೈಂದೂರು, ಪೊನ್ನಂಪೇಟೆ, ಮಡಿಕೇರಿ, ಆನೇಕಲ್‌, ಖಾನಾಪುರ, ಯಳಂದೂರು, ಗೋಕಾಕ ತಾಲ್ಲೂಕಿನಲ್ಲಿ ಫೌತಿ ಖಾತೆ ಅಭಿಯಾನ ಶೇ 1 ಕ್ಕಿಂತ ಕಡಿಮೆ ಆಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದ ಅವರು, ‘ಅನೇಕ ತಾಲ್ಲೂಕುಗಳಲ್ಲಿ ಫೋಟೊ ದಾಖಲೆ ಇಲ್ಲದೇ ಅಧಿಕಾರಿಗಳು ಪೌತಿ ಖಾತೆ ಮಾಡುತ್ತಿದ್ದಾರೆ’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಬಯೋ ಮೆಟ್ರಿಕ್‌ ಫೇಶಿಯಲ್‌ ರೆಕಗ್ನಿಷನ್ ನಮ್ಮ ಮುಂದಿನ ಗುರಿ. ಅದಕ್ಕೆ ಪ್ರಸ್ತುತ ಜಮೀನಿನ ವಾರಸುದಾರರ ಫೋಟೊ ಅಗತ್ಯ’ ಎಂದು ಅವರು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

‘49 ತಾಲ್ಲೂಕುಗಳ ಭೂದಾಖಲೆಗಳ ಸ್ಕ್ಯಾನ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರಾಯೋಗಿಕವಾಗಿ ಸ್ಕ್ಯಾನಿಂಗ್ ಆರಂಭಿಸಿದ 29 ತಾಲ್ಲೂಕುಗಳಲ್ಲೂ ಪ್ರಕ್ರಿಯೆ ಪೂರ್ಣವಾಗಿದೆ. ಈವರೆಗೆ 50 ಕೋಟಿ ಪುಟಗಳು ಸ್ಕ್ಯಾನ್‌ ಆಗಿವೆ. ಇನ್ನೂ 50 ಕೋಟಿ ಪುಟಗಳ ಸ್ಕ್ಯಾನಿಂಗ್ ಬಾಕಿ’ ಎಂದು ಅವರು ಹೇಳಿದರು.