ADVERTISEMENT

ಮೇವು ಖರೀದಿ ದರ ₹3 ಸಾವಿರಕ್ಕೆ ಏರಿಕೆ

ಅಂತರರಾಜ್ಯ ಮೇವು ಸಾಗಣೆ: ಜುಲೈ 31ರ ವರೆಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 21 ಮೇ 2019, 17:03 IST
Last Updated 21 ಮೇ 2019, 17:03 IST

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಕಾರಣ ಜನ– ಜಾನುವಾರುಗಳಿಗೆ ಕುಡಿಯುವ ನೀರು, ಉದ್ಯೋಗ ಸೃಷ್ಟಿ, ಮೇವಿನ ಕೊರತೆ ಆಗದಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅಲ್ಲದೆ, ಹಸಿರು ಮೇವಿನ ಖರೀದಿ ದರವನ್ನು ಪ್ರತಿ ಟನ್‌ ₹1,500ರಿಂದ ₹ 3,000ಕ್ಕೆ ಏರಿಕೆ ಮಾಡಲು ದೇಶಪಾಂಡೆ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಬರ ಪರಿಸ್ಥಿತಿ ಕುರಿತ ಸಚಿವ ಸಂಪುಟ ಉಪಸಮಿತಿ ಸಭೆ ತೀರ್ಮಾನಿಸಿದೆ.

ಕಳೆದ ಮುಂಗಾರು ಸಂದರ್ಭದಲ್ಲಿ ಬೆಳೆ ನಷ್ಟದಿಂದ ಸಂತ್ರಸ್ತರಾದ ರೈತರ ಪಾಲಿನ ಪರಿಹಾರ ಹಣವನ್ನು ಕೂಡಲೇ ಪಾವತಿ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ಆಗದಂತೆ ಬೋರ್‌ವೆಲ್‌ಗಳನ್ನು ಕೊರೆಯುವುದರ ಬದಲು ಖಾಸಗಿ ಬೋರ್‌ವೆಲ್‌ಗಳಲ್ಲಿ ಲಭ್ಯವಿರುವ ನೀರನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಕುಡಿಯುವ ನೀರಿನ ಬಾಕಿ ಬಿಲ್ಲನ್ನು ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಪಾವತಿಸಬೇಕು. ನೀರು ಸರಬರಾಜು ಟ್ಯಾಂಕರ್‌ಗಳಿಗೆ ಕಡ್ಡಾಯವಾಗಿ ಜಿಪಿಎಸ್‌ಅಳವಡಿಸುವ ಮೂಲಕ ದುರುಪಯೋಗ ತಡೆಗಟ್ಟಬೇಕು. ಜಾನುವಾರುಗಳಿಗೆ ಮೇವು ಬ್ಯಾಂಕ್‌ ತೆರೆಯಬೇಕು. ಸರ್ಕಾರೇತರ ಸಂಸ್ಥೆಗಳು ಗೋಶಾಲೆ ತೆರೆಯಲು ಮುಂದೆ ಬಂದರೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಜನ ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಸೃಷ್ಟಿ, ಸಕಾಲಿಕ ವೇತನ ಪಾವತಿ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.