ADVERTISEMENT

ಜಾನುವಾರು ಹತ್ಯೆ: ಸದ್ಯಕ್ಕೆ ಕಠಿಣ ಕ್ರಮ ಇಲ್ಲ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 21:04 IST
Last Updated 26 ಫೆಬ್ರುವರಿ 2021, 21:04 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಜಾನುವಾರು ಸಾಗಣೆ ಮಾಡುವವರ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಕಾಯ್ದೆ–2020 ಅನ್ನು ಸದ್ಯಕ್ಕೆ ಕಠಿಣವಾಗಿ ಅನ್ವಯ ಮಾಡುವುದಿಲ್ಲ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ನೀಡಿರುವ ತನ್ನ ಭರವಸೆ ಮುಂದುವರಿಸಿದೆ.

ಈ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿರುವುದನ್ನು ಗಮನದಲ್ಲಿ ಇಟ್ಟುಕೊಂಡು ತಿದ್ದುಪಡಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಮುಖ್ಯ ನ್ಯಾಯಮುರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸಮಯ ನೀಡಿತು. ಇದೇ ವೇಳೆ ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ಸಮಯ ಬೇಕು ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ಕೋರಿದರು. ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಪೀಠ ಮುಂದೂಡಿತು.

‘ಈ ಹಿಂದಿನ ವಿಚಾರಣೆ ವೇಳೆ ಮಧ್ಯಂತರ ತಡೆ ಕೋರಿಕೆಯನ್ನು ಪರಿಗಣಿಸುವುದಾಗಿ ಪೀಠ ಹೇಳಿದಾಗ, ನಿಯಮಾವಳಿ ರೂಪಿಸುವ ತನಕ ಹೊಸ ಕಾಯ್ದೆಯ ಸೆಕ್ಷನ್ 5ರ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದು ಸರ್ಕಾರ ಭರವಸೆ ನೀಡಿತ್ತು.

ADVERTISEMENT

‘ಕೃಷಿ ಉದ್ದೇಶಕ್ಕಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಜಾನುವಾರು ಸಾಗಿಸಿದರೂ ರೈತರ ವಿರುದ್ಧ ಪ್ರಕರಣ ದಾಖಲಿಸಲು ಹೊಸ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಜಾನುವಾರು ರಕ್ಷಣೆ ಹೆಸರಿನಲ್ಲಿ ಈ ಕಾಯ್ದೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳಲಿದ್ದಾರೆ’ ಎಂಬುದು ಅರ್ಜಿದಾರರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.