ADVERTISEMENT

ಕಾವೇರಿ–2 ತಂತ್ರಾಂಶ: ಆಸ್ತಿ ನೋಂದಣಿಗೆ ಮತ್ತೆ ಸರ್ವರ್ ಕಂಟಕ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 20:23 IST
Last Updated 20 ಜೂನ್ 2025, 20:23 IST
<div class="paragraphs"><p>property registration</p></div>

property registration

   

ಬೆಂಗಳೂರು: ಕಾವೇರಿ–2 ತಂತ್ರಾಂಶದಲ್ಲಿ ಸರ್ವರ್‌ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ತಿ ನೋಂದಣಿ ಪ್ರಕ್ರಿಯೆ ತೀರಾ ನಿಧಾನ ಗತಿಯಲ್ಲಿ ನಡೆಯುತ್ತಿದೆ. ತಂತ್ರಾಂಶದಲ್ಲಿ ಪದೇ–ಪದೇ ‘ಸರ್ವರ್‌ ಡೌನ್‌’ ಎಂದು ಬರುತ್ತಿರುವ ಕಾರಣ, ಜನರು ಉಪ ನೋಂದಣಾಧಿಕಾರಿಗಳ ಕಚೇರಿ ಎದುರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ನಗರದ ವಿಜಯನಗರ ಉಪ ನೋಂದಣಾಧಿಕಾರಿಗಳ ಕಚೇರಿಗೆ ಶುಕ್ರವಾರ ಭೇಟಿ ನೀಡಿದಾಗ ಜನರು ಸರತಿಯಲ್ಲಿ ನಿಂತಿದ್ದರು. ಸುಮಾರು ಅರ್ಧಗಂಟೆ ನಿಂತಿದ್ದರೂ ಸರತಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ADVERTISEMENT

ಅಲ್ಲಿಯೇ ಇದ್ದ ಮಧ್ಯ ವಯಸ್ಕ ಶಿವರಾಜು ಸಿ. ಅವರನ್ನು ಮಾತಿಗೆ ಎಳೆದಾಗ, ‘ಇಲ್ಲೇ ಸುಬ್ಬಣ್ಣ ಗಾರ್ಡನ್‌ನಲ್ಲಿ ಮನೆ ಖರೀದಿಸಿದ್ದೇನೆ. ಅದರೆ ನೋಂದಣಿಗೆ ಹಣ ಕಟ್ಟಲು ಆಗುತ್ತಿಲ್ಲ. ಪೇಮೆಂಟ್‌ ಗೇಟ್‌ವೇ ಪದೇ–ಪದೇ ‘ಟೈಮ್‌ ಔಟ್‌’ ಎಂದು ಹೇಳುತ್ತಿದೆ. ಮೂರು ದಿನಗಳಿಂದಲೂ ಹೀಗೇ ಆಗುತ್ತಿದೆ. ಕೆಲವರದ್ದು ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗಿದೆ. ಆದರೆ ಕಾವೇರಿ–2ನಲ್ಲಿ ತೋರಿಸುತ್ತಿಲ್ಲ’ ಎಂದರು.

ಅಲ್ಲಿಂದ ಗಾಂಧಿನಗರದ ಉಪ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿದರೂ ಇಂಥದ್ದೇ ಸ್ಥಿತಿ ಇತ್ತು. ಅಲ್ಲೂ ಜನ ಸಾಲುಗಟ್ಟಿ ನಿಂತಿದ್ದರು. ‘ಒಂದು ವಾರದಿಂದ ಬರುತ್ತಿದ್ದೇನೆ. ನನ್ನ ಕೆಲಸ ಆಗುತ್ತಿಲ್ಲ. ಮೊದಲಿಗೆ ನೋಂದಣಿಗೆ ಸ್ಲಾಟ್‌ ಸಿಕ್ಕಿರಲಿಲ್ಲ. ಅದು ಸಿಕ್ಕು ನಾಲ್ಕು ದಿನವಾಗಿದೆ. ಆದರೆ ಸರ್ವರ್ ಡೌನ್‌ ಎಂದು ಬರುತ್ತಿದೆ’ ಎಂದು ಬಾಲಕೃಷ್ಣ ಎಂ. ಮಾತಿಗಿಳಿದರು. ಅವರ ಹಿಂದೆ ನಿಂತಿದ್ದ ಪ್ರಶಾಂತ್ ಮತ್ತು ಕೇಶವ ಅವರದ್ದೂ ಇದೇ ಮಾತು.

ಸರ್ವರ್‌ ಸಂಪೂರ್ಣ ಡೌನ್‌ ಆಗಿರದೆ, ಮಧ್ಯೆ–ಮಧ್ಯೆ ಕೆಲಸ ಮಾಡುತ್ತಿದೆ. ಇದರಿಂದ ಬಹುತೇಕ ಕೆಲಸಗಳು ಅರೆಬರೆಯಾಗುತ್ತಿವೆ. ನಾಗರಿಕರ ಲಾಗಿನ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ, ಸಬ್‌ಮಿಟ್‌ ಕೊಟ್ಟ ತಕ್ಷಣ ಸರ್ವರ್ ಡೌನ್‌ ಆಗುತ್ತಿದೆ. ನೋಂದಣಿ ವೇಳೆ ಬಯೊಮೆಟ್ರಿಕ್ ವಿವರಗಳನ್ನು ತೆಗೆದುಕೊಳ್ಳುತ್ತಿಲ್ಲ ಮತ್ತು ಫೋಟೊ ತೆಗೆಯಲೂ ಸಾಧ್ಯವಾಗುತ್ತಿಲ್ಲ. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಗಣಕೀಕರಣ ವಿಭಾಗವನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ಅಧಿಕಾರಿ, ‘ಸರ್ವರ್ ಸಮಸ್ಯೆ ಮತ್ತೆ ಆರಂಭವಾಗಿದೆ. ರಾಜ್ಯದಾದ್ಯಂತ ಪ್ರತಿದಿನ ಸರಾಸರಿ 8,000ದಿಂದ 9,000 ನೋಂದಣಿ ಆಗುತ್ತದೆ. ಹಿಂದಿನ ವಾರದ ಒಂದೆರಡು ದಿನ ನೋಂದಣಿಗಳ ಸಂಖ್ಯೆ ಹೆಚ್ಚಾಗಿದೆ. ಆಗಲೂ ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸಿತ್ತು. ಆದರೆ ಏಳೆಂಟು ದಿನಗಳಿಂದ ಸಮಸ್ಯೆ ಕಾಡುತ್ತಿದೆ’ ಎಂದರು.

ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ಆ ಅಧಿಕಾರಿ, ‘ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇಲಾಖೆಯ ಆಯುಕ್ತರೇ ಖುದ್ದು ಆಸಕ್ತಿ ವಹಿಸಿ ಸಮಸ್ಯೆ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.