ADVERTISEMENT

ಕಾವೇರಿ-2 ತಂತ್ರಾಂಶ ಸಮಸ್ಯೆ ನಿವಾರಣೆ: ಡಿಜಿ ಲಾಕರ್‌ಗೆ ಆಸ್ತಿ ನೋಂದಣಿ ಪತ್ರ

ಚಂದ್ರಹಾಸ ಹಿರೇಮಳಲಿ
Published 27 ಮೇ 2025, 23:30 IST
Last Updated 27 ಮೇ 2025, 23:30 IST
   

ಬೆಂಗಳೂರು: ಆಸ್ತಿ ನೋಂದಣಿಯ ನಂತರ ಜನರು ಪತ್ರದ ಭೌತಿಕ ಪ್ರತಿ ಪಡೆಯಲು ಉಪ ನೋಂದಣಾಧಿಕಾರಿ ಕಚೇರಿಗೆ ಅಲೆದು ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ. ಇನ್ನುಮುಂದೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಅವರ ಇ-ಮೇಲ್‌, ಡಿಜಿ ಲಾಕರ್‌ಗೆ ನೇರವಾಗಿ ನೋಂದಣಿ ಪತ್ರ ರವಾನೆಯಾಗಲಿದೆ. 

ಸ್ವತ್ತುಗಳ ನೋಂದಣಿ ಸೇರಿದಂತೆ ಎಲ್ಲ ಬಗೆಯ ನೋಂದಣಿ ಪ್ರಕ್ರಿಯೆಗಳನ್ನು ಆನ್‌ಲೈನ್‌ ಮೂಲಕವೇ ನಡೆಸಲು ಕಂದಾಯ ಇಲಾಖೆ ಈಗಾಗಲೇ ಕ್ರಮ ಕೈಗೊಂಡಿದೆ. ನೋಂದಣಾಧಿಕಾರಿ ಗಳ ಸಹಿಯನ್ನೂ ಡಿಜಿಟಲೀಕರಣ ಗೊಳಿಸಲಾಗಿದ್ದು, ಡಿಜಿಟಲ್‌ ಸಹಿ ಒಳಗೊಂಡ ನೋಂದಣಿ ಪತ್ರಗಳನ್ನು ಕ್ಷಣ ಮಾತ್ರದಲ್ಲಿ ಮಾರಾಟಗಾರರು ಮತ್ತು ಖರೀದಿದಾರರ ಮೇಲ್‌ ಹಾಗೂ ಡಿಜಿ ಲಾಕರ್‌ಗೆ ನೇರವಾಗಿ ಕಳುಹಿಸುವ ವ್ಯವಸ್ಥೆ ಅಳವಡಿಸಲಾಗುತ್ತಿದೆ. 

ಡಿಜಿ ಲಾಕರ್‌ನಲ್ಲಿ ಲಭ್ಯವಿರುವ ಭೌತಿಕ ಪ್ರತಿಗಳನ್ನು ಜನರು ಅಗತ್ಯವಿದ್ದಾಗ ಮುದ್ರಣ ಮಾಡಿಕೊಳ್ಳ ಬಹುದು. ಕಳೆದುಹೋಗುವ, ದ್ವಿಪ್ರತಿ ತೆಗೆದುಕೊಳ್ಳಲು ಮತ್ತೆ ಶುಲ್ಕ ಭರಿಸುವ, ಉಪನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಡುವ ಪ್ರಮೇಯವೇ ಇರುವುದಿಲ್ಲ. ಋಣಭಾರ ಪ್ರಮಾಣ ಪತ್ರ ಹಾಗೂ ದೃಢೀಕೃತ ನಕಲುಗಳನ್ನೂ ವೆಬ್‌ ಆಧಾರಿತ ಅಪ್ಲಿಕೇಷನ್‌ ಮೂಲಕ ತಾವಿರುವ ಸ್ಥಳದಲ್ಲೇ ಪಡೆಯಬಹುದು. 

ADVERTISEMENT

ಕಾವೇರಿ-2 ತಂತ್ರಾಂಶದಲ್ಲಿನ ಸಮಸ್ಯೆಗಳನ್ನು ನಿವಾರಿಸಲಾಗಿದ್ದು, ನೋಂದಣಿ ಕಚೇರಿಗೆ ಹೋಗುವ ಮೊದಲೇ ಎಲ್ಲಾ ಮಾಹಿತಿ ಮತ್ತು ದಾಖಲಾತಿಗಳನ್ನು ಆನ್‍ಲೈನ್‌ ಮೂಲಕ ಜನರು ಅಪ್‍ಲೋಡ್‌ ಮಾಡುತ್ತಿದ್ದಾರೆ. ಉಪನೋಂದಣಾಧಿ ಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ ನಂತರ ನಾಗರಿಕರು ನಿಗದಿತ ಶುಲ್ಕಗಳನ್ನು ಆನ್‌ಲೈನ್‌ ಮೂಲಕವೇ ಪಾವತಿಸಬಹುದು. ನೋಂದಣಿಗಾಗಿ ತಮಗೆ ಅನುಕೂಲಕರವಾದ ದಿನ ಹಾಗೂ ಸಮಯವನ್ನು ಕಾವೇರಿ ತಂತ್ರಾಂಶದಲ್ಲೇ ಆಯ್ಕೆ ಮಾಡಿಕೊಳ್ಳ ಬಹುದು. ಪ್ರತಿ ಅರ್ಜಿಯ ಸ್ಥಿತಿಯ ಬಗ್ಗೆ ಮೊಬೈಲ್‌ ಮುಖಾಂತರವೂ ಮಾಹಿತಿ ನೀಡಲಾಗುತ್ತಿದೆ.   

‘ಭ್ರಷ್ಟಾಚಾರ ಮುಕ್ತಗೊಳಿಸಲು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು, ಪಾರದರ್ಶಕ ಸೇವೆ ಒದಗಿಸಲು ಸಾಧ್ಯವಾಗುವಂತೆ ಕಂದಾಯ ಇಲಾಖೆ ಕಳೆದ ಎರಡು ವರ್ಷಗಳಲ್ಲಿ ತಂತ್ರಾಂಶ ಆಧಾರಿತ ಸುಧಾರಣೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಅಳವಡಿಸಿಕೊಂಡಿದೆ. ಆಸ್ತಿ ಮತ್ತು ಭೂ ದಾಖಲೆಗಳ ಸೇವೆ ಸಂಪೂರ್ಣವಾಗಿ ಆನ್‌ಲೈನ್‌ ಮೂಲಕವೇ ಲಭ್ಯವಾಗುತ್ತಿವೆ. ಕಾವೇರಿ-2 ತಂತ್ರಾಂಶದಲ್ಲಿ ಯಾವುದೇ ಸಮಸ್ಯೆ ಇದ್ದರೆ ಪರಿಹರಿಸಿಕೊಳ್ಳಲು, ಅರ್ಜಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಲು ಹಾಗೂ ಕುಂದುಕೊರತೆಗಳನ್ನು ದಾಖಲಿಸಲು ಸಹಾಯವಾಣಿ ಸ್ಥಾಪಿಸಲಾಗಿದೆ’ ಎನ್ನುತ್ತಾರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌. 

ನೋಂದಣಿಯ ಗರಿಷ್ಠ ಸಮಯ 10 ನಿಮಿಷ: 
ಎ–ಖಾತಾ, ಬಿ–ಖಾತಾ, ಇ–ಸ್ವತ್ತು, ಪಹಣಿ, ಆಧಾರ್‌ ಕಾರ್ಡ್‌ ಮಾಹಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳ ವಿವಿಧ ತಂತ್ರಾಂಶ, ಭೂಮಿ ತಂತ್ರಾಂಶಗಳ ಮೂಲಕ ನೇರವಾಗಿ ಪಡೆಯಲಾಗುತ್ತಿದೆ. ಜನರು ಆಸ್ತಿ ನೋಂದಣಿಯ ಮಾಹಿತಿಯನ್ನು ಅಪ್‌ಲೋಡ್‌ ಮಾಡುತ್ತಿದ್ದಂತೆ ಆಸ್ತಿ ಮಾಲೀಕರ ಸಂಪೂರ್ಣ ಚಿತ್ರಣ ಖಚಿತವಾಗುತ್ತದೆ. ಉಪ ನೋಂದಣಾಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ಜನರೇ ನೇರವಾಗಿ ದಿನ ಹಾಗೂ ಸಮಯ ನಿಗದಿ ಮಾಡಿಕೊಳ್ಳಬಹುದು. ಯಾರು ಯಾವ ದಿನವನ್ನು ನೋಂದಣಿಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೋ ಆ ದಿನಕ್ಕೆ ಒಂದು ದಿನ ಮುಂಚಿತವಾಗಿ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಜನರು ಕಚೇರಿಗೆ ಭೇಟಿ ನೀಡಿದ 10 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 
ನೋಂದಣಿ ಕಚೇರಿಗೆ ಜನರು ಭೇಟಿ ನೀಡುವ ಗರಿಷ್ಠ ಸಮಯವನ್ನು 10 ನಿಮಿಷಕ್ಕೆ ನಿಗದಿ ಮಾಡಲಾಗಿದೆ. ಜನರು ಕಾಯುವುದನ್ನು ತಪ್ಪಿಸಲು ಲಾಗಿನ್‌, ಡಿಜಿ ಲಾಕರ್‌ಗೆ ನೇರ ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ 
ಶಾಲಿನಿ ರಜನೀಶ್‌ ಸರ್ಕಾರದ ಮುಖ್ಯ ಕಾರ್ಯದರ್ಶಿ

ಹಳೇ ದಾಖಲೆಗಳು ಶೀಘ್ರ ಲಭ್ಯ

ಹಲವು ದಾಖಲೆಗಳು ಕಾವೇರಿ–1 ತಂತ್ರಾಂಶದಲ್ಲೇ ಉಳಿದ ಕಾರಣ ಜನರಿಗೆ ಸಮಸ್ಯೆಯಾಗಿದೆ. ಹಳೆಯ ದಾಖಲೆಗಳು ತಕ್ಷಣಕ್ಕೆ ಲಭ್ಯವಾಗದೆ ಪರದಾಟ ನಡೆಸಿದ್ದಾರೆ.

‘ಕಾವೇರಿ–1 ರಿಂದ ಉಳಿಕೆಯಾದ ಎಲ್ಲ ದಾಖಲೆಗಳನ್ನು ಕಾವೇರಿ–2 ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಾ ಬಂದಿದೆ. ಉಳಿಕೆ ದಾಖಲೆಗಳ ನಿರ್ವಹಣೆಗಾಗಿ ಪ್ರತ್ಯೇಕ ಮಾದರಿ ರೂಪಿಸಲಾಗಿದೆ. ಎಲ್ಲ ಸಮಸ್ಯೆಗಳಿಗೂ ಶೀಘ್ರ ಪರಿಹಾರ ದೊರಕಲಿದೆ’ ಎನ್ನುತ್ತಾರೆ ನೋಂದಣಿ ಮಹಾ ಪರಿವೀಕ್ಷಕ ಕೆ.ಎ ದಯಾನಂದ್‌.  

ದುರುದ್ದೇಶ ಪೂರ್ವಕವಾಗಿ ವ್ಯವಸ್ಥೆಯನ್ನು ಹಾಳು ಮಾಡುವ ಜಾಲ (ಡಿ ಡಾಸ್ ಅಟ್ಯಾಕ್‌) ಸಕ್ರಿಯವಾಗಿದ್ದ ಕಾರಣ ಕೆಲ ದಿನಗಳು ನೋಂದಣಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿತ್ತು. ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಒಂದು ನೋಂದಣಾಧಿಕಾರಿ ಕಚೇರಿಯ ಯಾವ ಉಪ ನೋಂದಣಾಧಿಕಾರಿ ಕಚೇರಿಯ ಲ್ಲಾದರೂ ಆಸ್ತಿ ನೋಂದಣಿ ಮಾಡಬಹುದು. ಸರದಿಯಂತೆ ರಜಾ ದಿನಗಳಲ್ಲೂ ಕಚೇರಿಗಳು ಕೆಲಸ ಮಾಡುತ್ತಿವೆ. ಇದರಿಂದ ವರ್ಷದ 365 ದಿನವೂ ನೋಂದಣಿಗೆ ಅವಕಾಶವಾಗಿದೆ ಎಂದು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.