ADVERTISEMENT

ಐಎಂಎ ವಂಚನೆ ಪ್ರಕರಣ ಸಿಬಿಐ ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 20:00 IST
Last Updated 20 ಆಗಸ್ಟ್ 2019, 20:00 IST
   

ಬೆಂಗಳೂರು: ಸಾವಿರಾರು ಹೂಡಿಕೆ ದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿಗಳ ತನಿಖೆಯನ್ನು ರಾಜ್ಯ ಸರ್ಕಾರ ಮಂಗಳ ವಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸಿದೆ.

ಪ್ರಕರಣವನ್ನು ಸಿಬಿಐಗೆ ಒಪ್ಪಿಸಬಹುದೆಂದು ನಿರೀಕ್ಷಿಸಲಾಗಿತ್ತು. ಈ ಸಂಬಂಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಅವರ ಮುಂದೆ ಇದು ವಿಚಾರಣೆಗೆ ಬಂದಾಗ, ಸಿಬಿಐ ತನಿಖೆ ನಡೆಸುವುದಾಗಿ ಸರ್ಕಾರ ಹೇಳಿತು. ಸಂಜೆ ಅಧಿಕೃತ ಆದೇಶ ಹೊರಬಿದ್ದಿದೆ.

ವಂಚನೆ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು ರಾಜ್ಯದೊಳಗಿನ ಹಾಗೂ ಹೊರಗಿನ ಕಂಪನಿಗಳು ಹಾಗೂ ವಿವಿಧ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ವಹಿಸಲಾಗುತ್ತಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟ
ಪಡಿಸಿದೆ.

ADVERTISEMENT

ವಂಚನೆಗೆ ಸಂಬಂಧಿಸಿದಂತೆ ಕಮರ್ಷಿಯಲ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಸಾವಿರಾರು ದೂರು ಗಳು; ಇದುವರೆಗಿನ ಎಸ್‌ಐಟಿ ತನಿ ಖೆಯ ಪ್ರಗತಿ ಸಿಬಿಐಗೆ ಹಸ್ತಾಂತರವಾಗಲಿದೆ. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ನಡೆಯುತ್ತಿರುವ ಜಾರಿ ನಿರ್ದೇಶನಾಲಯದ ತನಿಖೆ ಮುಂದುವರಿಯಲಿದೆ.

ಅನರ್ಹಗೊಂಡಿರುವ ಶಿವಾಜಿ ನಗರಶಾಸಕ ರೋಷನ್‌ ಬೇಗ್‌, ಚಾಮರಾಜ ಪೇಟೆಯ ಶಾಸಕ ಜಮೀರ್‌ ಅಹಮದ್‌, ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಆಪ್ತರಾದ ಪರಿಷತ್‌ನ ಕಾಂಗ್ರೆಸ್‌ ಸದಸ್ಯ, ಸಚಿವರಾಗಿದ್ದಾಗ ಜೈಲಿಗೆ ಹೋಗಿ ಬಂದ ಬಿಜೆಪಿ ನಾಯಕ, ಐ.ಟಿ, ಪೊಲೀಸ್‌, ಆರ್‌ಬಿಐ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳು ಐಎಂಎ ಮಾಲೀಕ ಮನ್ಸೂರ್‌ ಖಾನ್‌ ಅವರಿಂದ ‘ಅಕ್ರಮ ಲಾಭ’ ಪಡೆದಿರುವ ಆರೋಪಕ್ಕೆ ಒಳಗಾಗಿದ್ದಾರೆ. ಬಿಜೆಪಿ ಸರ್ಕಾರ ತನ್ನ ರಾಜ ಕೀಯ ಎದುರಾಳಿಗಳನ್ನು ಹಣಿ ಯಲು, ಹಿಂದಿನ ಮೈತ್ರಿ ಸರ್ಕಾರ ಉರುಳಿಸಲು ಕೈಜೋಡಿಸಿದ ರಾಜಕಾರಣಿಗಳನ್ನು ರಕ್ಷಿಸಲು ಸಿಬಿಐ ಅನ್ನು ಬಳಸಿಕೊಳ್ಳಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ, ಸಿಬಿಐ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವುದೇ ಎಂಬ ಪ್ರಶ್ನೆ ಎದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.