ADVERTISEMENT

ಪ್ರಭಾವ ಬಳಸಿ ಪಾರಾಗಲು ಯತ್ನಿಸಿದ್ದ ವಿನಯ ಕುಲಕರ್ಣಿ: ಸಿಬಿಐ ವರದಿ

​ಪ್ರಜಾವಾಣಿ ವಾರ್ತೆ
Published 31 ಮೇ 2021, 20:05 IST
Last Updated 31 ಮೇ 2021, 20:05 IST
ವಿನಯ ಕುಲಕರ್ಣಿ
ವಿನಯ ಕುಲಕರ್ಣಿ   

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶಗೌಡ ಹತ್ಯೆ ಪ್ರಕರಣದ ಆರೋಪಿ ವಿನಯ ಕುಲಕರ್ಣಿ ಅವರು ತಮ್ಮ ಪ್ರಭಾವ ಬಳಸಿ ಆರೋಪದಿಂದ ಪಾರಾಗಲು ಪ್ರಯತ್ನಿಸಿದ್ದರು ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ,ಹೈಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಿದೆ.

ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ, ಅವರ ವಿರುದ್ಧದ ಗಂಭೀರ ಆರೋಪಗಳ ಅವಲೋಕನ ನಡೆಸಿತು.

ಕುಲಕರ್ಣಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು 2021ರ ಜನವರಿ 21ರಂದು ತಿರಸ್ಕರಿಸಲಾಗಿತ್ತು. 2021ರ ಜನವರಿ 31ರಂದು ದೋಷಾರೋಪ ಸಲ್ಲಿಕೆಯಾದ ಬಳಿಕ ಮತ್ತೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ‘ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂಬ ಒಂದೇ ಕಾರಣಕ್ಕೆ ಜಾಮೀನು ನೀಡಲು ಸಾಧ್ಯವಾಗುವುದಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

ADVERTISEMENT

‘ವಿನಯ ಕುಲಕರ್ಣಿ ಮತ್ತು ಹತ್ಯೆಯ ಪ್ರಮುಖ ಆರೋಪಿಗಳು ಮೊಬೈಲ್ ದೂರವಾಣಿ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದರು. ಕೊಲೆ ನಡೆಯುವ ಮುನ್ನ ಇಬ್ಬರೂ ನೂರಾರು ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಕೊಲೆಯ ಬಳಿಕ ವಿನಯ ಕುಲಕರ್ಣಿ ಅವರನ್ನು ಆರೋಪಿ ಬೆಂಗಳೂರಿನಲ್ಲಿ ಭೇಟಿಯಾಗಿ ಮರುದಿನ ಪೊಲೀಸರಿಗೆ ಶರಣಾಗಿದ್ದಾರೆ’ ಎಂಬುದನ್ನು ಪೀಠ ಗಮನಿಸಿತು.

‘ಪ್ರಕರಣ ಬಗೆಹರಿಸಿಕೊಳ್ಳಲು ಮೃತ ಯೋಗೇಶಗೌಡ ಅವರ ಸಹೋದರನೊಂದಿಗೆ ವಿಫಲ ಪ್ರಯತ್ನ ನಡೆಸಿದರು. ₹20 ಲಕ್ಷ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನ ನೀಡುವ ಭರವಸೆಯನ್ನು ಪತ್ನಿಗೆ ನೀಡಿದ್ದರು. ಅರ್ಜಿದಾರರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾರಣ ತಮ್ಮ ಪ್ರಭಾವ ಬಳಸಿಕೊಂಡು ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಸಾಕ್ಷ್ಯ ನಾಶಕ್ಕೆ ಮತ್ತು ಸುಳ್ಳು ಆರೋಪಪಟ್ಟಿ ಸಲ್ಲಿಸಲು ತನಿಖಾಧಿಕಾರಿಗೆ ₹2 ಲಕ್ಷ ನೀಡಿದ್ದಾರೆ’ ಎಂದು ಸಿಬಿಐ ಸಲ್ಲಿಸಿರುವ ದಾಖಲೆಗಳನ್ನು ಪೀಠ ಅವಲೋಕಿಸಿತು.

2016ರ ಜೂನ್ 15ರಂದು ಯೋಗೇಶಗೌಡ ಹತ್ಯೆಯಾಗಿತ್ತು. 2020 ನವೆಂಬರ್ 5ರಂದು ವಿನಯ ಕುಲಕರ್ಣಿ ಬಂಧನವಾಗಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿದ್ದರಿಂದ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.