ADVERTISEMENT

ಕಾಂಗ್ರೆಸ್ಸಿನದು ಹುಳಿ ಹಿಂಡುವ ರಾಜಕಾರಣ: ಸಚಿವ ಸಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 8:51 IST
Last Updated 14 ನವೆಂಬರ್ 2021, 8:51 IST
ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ
ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ    

ಬೆಂಗಳೂರು: ‘ಬಿಟ್ ಕಾಯಿನ್ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ವಿನಾಕಾರಣ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಲು ಹವಣಿಸುತ್ತಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಆರೋಪಿಸಿದ್ದಾರೆ.

‘ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತೆ ಜನಪರ ಆಡಳಿತ ನೀಡುತ್ತಾ ಈಗಾಗಲೇ ಯಶಸ್ವಿಯಾಗಿ ಶತದಿನ ಪೂರೈಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಕಾರ್ಯಸಾಧನೆಯನ್ನು ಕಂಡು ಕಾಂಗ್ರೆಸಿಗರು ಹತಾಶರಾಗಿದ್ದಾರೆ’ ಎಂದಿದ್ದಾರೆ.

‘ಬಿಟ್-ಕಾಯಿನ್ ವಿಚಾರದಲ್ಲಿ ವಿವಾದ ಸೃಷ್ಟಿಸಿ ರಾಜಕೀಯ ದುರ್ಲಾಭ ಪಡೆದುಕೊಳ್ಳಬಹುದು ಎಂಬ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಮುಖಂಡರಿಗೆ, ಇದೇ ಬಿಟ್ ಕಾಯಿನ್ ಮುಂದಿನ ದಿನಗಳಲ್ಲಿ ತಿರುಗುಬಾಣವಾಗಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಬಿಟ್ ಕಾಯಿನ್ ಹಗರಣದ ಮಾಹಿತಿಯನ್ನು ಬಿಜೆಪಿ ನಾಯಕರೇ ತಮಗೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ಸಿನ ಮುಖಂಡರೊಬ್ಬರು ಹೇಳುವ ಮೂಲಕ ತನಿಖೆಯ ಹಾದಿ ತಪ್ಪಿಸಲು ಮತ್ತು ಬಿಜೆಪಿಯಲ್ಲಿ ಹುಳಿ ಹಿಂಡಿ ಒಡಕು ಸೃಷ್ಟಿಸಲು ಹವಣಿಸಿದ್ದಾರೆ. ಇಂಥ ಹುನ್ನಾರಗಳು ನಡೆಯುವುದಿಲ್ಲ. ಬಿಜೆಪಿಯಲ್ಲಿ ಆಂತರಿಕ ಒಕ್ಕಟ್ಟು ಗಟ್ಟಿಯಾಗಿದೆ. ಕಾಂಗ್ರೆಸ್ಸಿನಂತೆ, ‘ಒಂದು ಮನೆ ಹಲವು ಬಾಗಿಲು’ ಎಂಬಂಥ ಪರಿಸ್ಥಿತಿ ಇಲ್ಲ’ ಎಂದೂ ತಿರುಗೇಟು ನೀಡಿದ್ದಾರೆ.

‘ಈ ಹಗರಣ ಕೆಲವು ಕಾಂಗ್ರೆಸ್ ಮುಖಂಡರ ಕಾಲಿಗೆ ಈಗಾಗಲೇ ಸುತ್ತಿಕೊಂಡಿರುವುದು ಬಹಿರಂಗವಾಗಿದ್ದರೂ, ತಾವೇ ಸ್ವತಃ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ದುಸ್ಸಾಹಸಕ್ಕೆ ಇಳಿದಿರುವುದು ವಿಚಿತ್ರ’ ಎಂದು ಸಚಿವರು ಟೀಕಿಸಿದ್ದಾರೆ.

‘ಈ ಹಗರಣದ ತನಿಖೆ ನಡೆಸಿದ ಬಳಿಕ ಇ.ಡಿ ಮತ್ತು ಸಿಬಿಐಗೆ ಶಿಫಾರಸು ಮಾಡಿದ್ದೇ ನಮ್ಮ ಸರ್ಕಾರ, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ‌ತನಿಖೆ ಸರಿಯಾದ ದಿಕ್ಕಿನಲ್ಲಿಯೇ ನಡೆಯುತ್ತಿರುವುದರಿಂದ ಯಾರೂ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.