ADVERTISEMENT

ರೆಡ್ಡಿಗೆ ಖೆಡ್ಡಾ ತೋಡಿದ ಸಿಸಿಬಿ!

‘ಇ.ಡಿ’ ತನಿಖೆ ಮೇಲೆ ಪ್ರಭಾವ ಬೀರುವುದಾಗಿ ₹20 ಕೋಟಿ ಡೀಲ್

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 19:07 IST
Last Updated 7 ನವೆಂಬರ್ 2018, 19:07 IST
ಡೀಲ್ ನಡೆಯಿತು ಎನ್ನಲಾದ ಸಭೆಯಲ್ಲಿ ಜನಾರ್ದನರೆಡ್ಡಿಗೆ ಸಿಹಿ ತಿನಿಸುತ್ತಿರುವ ಫರೀದ್
ಡೀಲ್ ನಡೆಯಿತು ಎನ್ನಲಾದ ಸಭೆಯಲ್ಲಿ ಜನಾರ್ದನರೆಡ್ಡಿಗೆ ಸಿಹಿ ತಿನಿಸುತ್ತಿರುವ ಫರೀದ್   

ಬೆಂಗಳೂರು: ಬಳ್ಳಾರಿ ಉಪ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಮರುದಿನವೇ ಬಿಜೆಪಿ ಮುಖಂಡ ಗಾಲಿ ಜನಾರ್ದನರೆಡ್ಡಿ ₹20 ಕೋಟಿ ಮೊತ್ತದ ‘ಇ.ಡಿ ಡೀಲ್’ ನಲ್ಲಿ ಭಾಗಿಯಾಗಿದ್ದಾರೆ ಎಂದು ಸಿಸಿಬಿ ಬಾಂಬ್ ಸಿಡಿಸಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆ ಮೇಲೆ ಪ್ರಭಾವ ಬೀರುವ ಮೂಲಕ ತಮಗೆ ಅನುಕೂಲ ಮಾಡಿಕೊಡುವುದಾಗಿ ವಂಚಕ ಕಂಪನಿಯ ಮಾಲೀಕನ ಜತೆ ರೆಡ್ಡಿ ವ್ಯವಹರಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

ಆ ಕಂಪನಿಯ ಮಾಲೀಕ ಸಿಸಿಬಿ ಬಲೆಗೆ ಬಿದ್ದಿರುವ ವಿಚಾರ ತಿಳಿದು ಬಂಧನದ ಭೀತಿಯಿಂದ ರೆಡ್ಡಿ ತಲೆಮರೆಸಿಕೊಂಡಿದ್ದಾರೆ. ಬೆಂಗಳೂರು, ಚಿತ್ರದುರ್ಗ, ಬಳ್ಳಾರಿ ಮಾತ್ರವಲ್ಲದೇ ಹೈದರಾಬಾದ್‌ನಲ್ಲೂ ಸಿಸಿಬಿ ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ. ಅಲ್ಲದೆ, ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ರೆಡ್ಡಿ ಅವರ ‘ಪಾರಿಜಾತ’ ನಿವಾಸದ ಮೇಲೂ ದಾಳಿ ನಡೆಸಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ADVERTISEMENT

ರೆಡ್ಡಿ ಅವರ ಆಪ್ತ ಸಹಾಯಕ ಅಲಿಖಾನ್, ಎಸಿಎಂಎಂ ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನು ಪಡೆದಿದ್ದಾರೆ. ಹಾಗೆಯೇ ನ್ಯಾಯಾಂಗ ಬಂಧನದಲ್ಲಿದ್ದ ‘ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈ.ಲಿ’ ಕಂಪನಿ ಮಾಲೀಕ ಸೈಯದ್ ಅಹಮದ್ ಫರೀದ್ ಹಾಗೂ ಬಳ್ಳಾರಿಯ ‘ರಾಜಮಹಲ್ ಫ್ಯಾನ್ಸಿ ಜ್ಯುವೆಲರ್ಸ್‌’ ಮಾಲೀಕ ರಮೇಶ್‌ ಕೊಠಾರಿ ಸಹ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ.

ಏನಿದು ಪ್ರಕರಣ: ಈ ಪ್ರಕರಣದ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್, ‘ದೇವರಜೀವನಹಳ್ಳಿಯಲ್ಲಿ ಫರೀದ್ ಮಾಲೀಕತ್ವದ ಆ್ಯಂಬಿಡೆಂಟ್ ಕಂಪನಿ ಇದೆ. ಅವರ ಮಗ ಅಫಕ್ ಅದರ ನಿರ್ದೇಶಕ. ‘ನಮ್ಮಲ್ಲಿ ಹಣ ಹೂಡಿದರೆ, ಶೇ 40 ರಿಂದ ಶೇ 50ರಷ್ಟು ಬಡ್ಡಿಯ ಸಮೇತ ನಾಲ್ಕು ತಿಂಗಳಲ್ಲಿ ಹಣ ಮರಳಿಸುತ್ತೇವೆ’ ಎಂದು ಅವರು ಪ್ರಚಾರ ಮಾಡಿದ್ದರು. ಅದನ್ನು ನಂಬಿ 15 ಸಾವಿರಕ್ಕೂ ಹೆಚ್ಚು ಮಂದಿ ₹600 ಕೋಟಿಯಷ್ಟು ಹೂಡಿಕೆ ಮಾಡಿದ್ದರು. ಆ ನಂತರ ಹಣ ಮರಳಿಸದೆ ತಂದೆ–ಮಗ ಸತಾಯಿಸುತ್ತಿದ್ದರು’ ಎಂದು ಹೇಳಿದರು.

‘ವಂಚನೆಗೆ ಒಳಗಾದವರು ಕಂಪನಿ ವಿರುದ್ಧ ದೇವರಜೀವನಹಳ್ಳಿ ಠಾಣೆಗೆ ದೂರು ಕೊಟ್ಟಿದ್ದರು. ಎರಡು ವಾರಗಳ ಹಿಂದೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಫರೀದ್‌ನ ಬ್ಯಾಂಕ್ ಖಾತೆಗಳ ವಿವರ ಪರಿಶೀಲಿಸಿದಾಗ, ಬೆಂಗಳೂರು ಅವೆನ್ಯೂ ರಸ್ತೆಯ ‘ಅಂಬಿಕಾ ಸೇಲ್ಸ್‌ ಕಾರ್ಪೋರೇಷನ್’ ಆಭರಣ ಮಳಿಗೆ ಮಾಲೀಕ ರಮೇಶ್ ಖಾತೆಗೆ ₹ 20 ಕೋಟಿ ವರ್ಗಾವಣೆ ಆಗಿರುವುದು ಗೊತ್ತಾಯಿತು.’

‘ಆ ಹಣದ ಜಾಡು ಹಿಡಿದು ಹೊರಟಾಗ ಜನಾರ್ದನ ರೆಡ್ಡಿ, ಅಲಿಖಾನ್, ಬಳ್ಳಾರಿ ಆಭರಣ ಮಳಿಗೆ ಮಾಲೀಕ ರಮೇಶ್, ಫರೀದ್ ಆಪ್ತರಾದ ಎಚ್‌ಎಸ್‌ಆರ್‌ ಲೇಔಟ್‌ನ ಬ್ರಿಜೇಶ್ ರೆಡ್ಡಿ ಅವರ ಹೆಸರುಗಳೂ ಪತ್ತೆಯಾದವು.‘ಇ.ಡಿ ತನಿಖೆಯಲ್ಲಿ ನಿನಗೆ ಸಹಾಯ ಮಾಡಿಸುತ್ತೇನೆ ಎಂದು ಜನಾರ್ದನರೆಡ್ಡಿ ಹೇಳಿದ್ದರು. ಅದಕ್ಕಾಗಿ ಹಣ ಕೊಟ್ಟಿದ್ದೆ’ ಎಂದು ಫರೀದ್ ಹೇಳಿಕೆ ಕೊಟ್ಟಿದ್ದಾರೆ. ಆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು. ಇ.ಡಿ ಅಧಿಕಾರಿಗಳ ಜತೆಗೂ ಸಂಪರ್ಕದಲ್ಲಿದ್ದೇವೆ’ ಎಂದು ಮಾಹಿತಿ ನೀಡಿದರು.

ರೆಡ್ಡಿ–ಫರೀದ್ ‘ಡೀಲ್’ನ ವಿವರ: ‘ದೇವನಹಳ್ಳಿಯಲ್ಲಿ ₹ 70 ಕೋಟಿ ಖರ್ಚು ಮಾಡಿ ಫ್ಲ್ಯಾಟ್‌ಗಳನ್ನು ಖರೀದಿಸಿದ್ದ ಫರೀದ್, ಅದರ ಎಲ್ಲ ಹಣವನ್ನೂ ಬ್ಯಾಂಕ್ ಮೂಲಕವೇ ಪಾವತಿಸಿದ್ದರು. ಒಬ್ಬನೇ ವ್ಯಕ್ತಿ ಅಷ್ಟೊಂದು ಹಣಕಾಸಿನ ವ್ಯವಹಾರ ನಡೆಸಿದ್ದರಿಂದ ಆದಾಯ ತೆರಿಗೆ ಹಾಗೂ ಇ.ಡಿ ಅಧಿಕಾರಿಗಳು ಇದೇ ಜನವರಿಯಲ್ಲಿ ಕಂಪನಿ ಮೇಲೆ ಪ್ರತ್ಯೇಕವಾಗಿ ದಾಳಿ ನಡೆಸಿದ್ದರು. ಆಗ ಅದೊಂದು ವಂಚಕ ಕಂಪನಿ ಎಂಬುದು ಗೊತ್ತಾಗಿತ್ತು’ ಎಂದು ಸಿಸಿಬಿ ಮೂಲಗಳು ಹೇಳಿವೆ.

ಆ ಪ್ರಕರಣದಿಂದ ಹೇಗಾದರೂ ಹೊರಬರಬೇಕೆಂದು ಫರೀದ್ ತನ್ನ ಆಪ್ತನಾದ ಬ್ರಿಜೇಶ್‌ ಬಳಿ ಹೇಳಿಕೊಂಡಾಗ, ‘ನನಗೆ ಜನಾರ್ದನರೆಡ್ಡಿ ಅವರ ಪಿಎ ಆಲಿಖಾನ್ ಗೊತ್ತು. ಅವರ ಬಳಿ ಮಾತನಾಡಿದರೆ ಕೆಲಸ ಆಗಬಹುದು’ ಎಂದು ಹೇಳಿದ್ದರು. ಅದಕ್ಕೆ ಒಪ್ಪಿಕೊಂಡು ಮಾರ್ಚ್‌ನಲ್ಲಿ ಡೀಲ್‌ ಮಾತುಕತೆಗೆ ಮುಹೂರ್ತ ನಿಗದಿ ಮಾಡಿದ್ದರು.

‘ತಾಜ್‌ ವೆಸ್ಟೆಂಡ್ ಹೋಟೆಲ್‌ನಲ್ಲಿ ಜನಾರ್ದನ್‌ರೆಡ್ಡಿ ಜತೆ ಮಾತುಕತೆ ನಡೆಸಿದ್ದೆ. ‘₹ 20 ಕೋಟಿ ಕೊಟ್ಟರೆ, ಇ.ಡಿ ಅಧಿಕಾರಿಗಳಿಗೆ ಹೇಳಿ ಕೇಸ್ ತೆಗೆಸುತ್ತೇನೆ’ ಎಂದಿದ್ದರು. ಅದಕ್ಕೆ ಒಪ್ಪಿಕೊಂಡೆ. ಹಣವನ್ನು ನಗದು ರೂಪದಲ್ಲೇ ಕೊಡುವಂತೆ ಕೇಳಿದ್ದರು. ಕೊನೆಗೆ, ನಗದು ವ್ಯವಹಾರ ಸೂಕ್ತವಲ್ಲವೆಂದು ಆಭರಣ ಮಳಿಗೆಗಳ ಮಾಲೀಕರನ್ನು ಕರೆತಂದರು’ ಎಂದು ಫರೀದ್ ಹೇಳಿಕೆ ಕೊಟ್ಟಿರುವುದಾಗಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಆಲಿಖಾನ್‌ ಸೂಚನೆಯಂತೆ ಬೆಂಗಳೂರಿನ ಆಭರಣ ವ್ಯಾಪಾರಿ ರಮೇಶ್ ಕೊಠಾರಿ ಬ್ಯಾಂಕ್ ಖಾತೆಗೆ ₹ 20 ಕೋಟಿ ವರ್ಗಾಯಿಸಿದ್ದೆ. ಆ ಹಣವನ್ನು ತನ್ನ ಬಳಿ ಇಟ್ಟುಕೊಂಡ ಕೊಠಾರಿ, ಅದಕ್ಕೆ ಪ್ರತಿಯಾಗಿ ₹ 57 ಕೆ.ಜಿ. ಚಿನ್ನದ ಗಟ್ಟಿಗಳನ್ನು ಏಳು ಹಂತಗಳಲ್ಲಿ ಬಳ್ಳಾರಿಯ ಆಭರಣ ವ್ಯಾಪಾರಿ ರಮೇಶ್‌ಗೆತಲುಪಿಸಿದ್ದರು.

ಈ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ಆ ನಂತರ ಚಿನ್ನವನ್ನು ಯಾರು ತೆಗೆದುಕೊಂಡು ಹೋದರು ಗೊತ್ತಿಲ್ಲ’ ಎಂದು ಫರೀದ್ ಹೇಳಿದ್ದಾರೆ.

‘ಬಳ್ಳಾರಿಯ ರಮೇಶ್ ಅವರನ್ನು ವಿಚಾರಣೆ ನಡೆಸಿದಾಗ, ‘ರೆಡ್ಡಿ ಅವರ ಸೂಚನೆಯಂತೆಯೇ ಅಲಿಖಾನ್ ಅವರು ಮಳಿಗೆಗೆ ಬಂದು ಚಿನ್ನ ತೆಗೆದುಕೊಂಡು ಹೋಗಿದ್ದರು. ಕೊಠಾರಿ ಜತೆ ಆರು ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದೇನೆ. ಈ 57 ಕೆ.ಜಿಯ ಚಿನ್ನದಗಟ್ಟಿ ಹಿಂದೆ ಇಂಥ ಸಂಚಿತ್ತು ಎಂಬುದು ನನಗೆ ಗೊತ್ತಿರಲಿಲ್ಲ’ ಎಂದು ಹೇಳಿದ್ದಾರೆ. ಹೀಗಾಗಿ, ರೆಡ್ಡಿ ಹಾಗೂ ಅಲಿಖಾನ್ ಸಿಗುವವರೆಗೂ ಚಿನ್ನ ಜಪ್ತಿ ಕಷ್ಟಸಾಧ್ಯ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

***

ಸದ್ಯ ಬಂಧನ ಬೇಡ ಎಂದಿದ್ದ ಸಿಎಂ?

‘ಚುನಾವಣೆ ಮುಗಿಯುವವರೆಗೂ ಜನಾರ್ದನರೆಡ್ಡಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಡಿ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಿಸಿಬಿ ಪೊಲೀಸರಿಗೆ ಸೂಚಿಸಿದ್ದರು ಎನ್ನಲಾಗಿದೆ.

‘ಚುನಾವಣಾ ಸಂದರ್ಭದಲ್ಲಿ ರೆಡ್ಡಿ ಅವರನ್ನು ಬಂಧಿಸಿದರೆ, ಅದು ರಾಜಕೀಯ ಬಣ್ಣ ಪಡೆದುಕೊಳ್ಳಬಹುದು. ಮತದಾನದ ಮೇಲೂ ಪ್ರಭಾವ ಬೀರಬಹುದು. ಹೀಗಾಗಿ, ಸದ್ಯ ಬಂಧನ ಬೇಡ. ಚುನಾವಣೆ ಮುಗಿಯುವವರೆಗೂ ಸಾಕ್ಷ್ಯಗಳನ್ನು ಕಲೆಹಾಕಿಕೊಳ್ಳಿ’ ಎಂಬ ಸಲಹೆ ಕೊಟ್ಟಿದ್ದರು ಎಂದು ತಿಳಿದುಬಂದಿದೆ.

ರೆಡ್ಡಿಗೆ ಸಿಸಿಬಿಯಿಂದ ಮಾಹಿತಿ ಸೋರಿಕೆಯಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್, ‘ತನಿಖೆ ಸಿಸಿಬಿಗೆ ವರ್ಗವಾಗಿ 15 ದಿನಗಳಾಗಿವೆ ಅಷ್ಟೆ. ಗೋಪ್ಯವಾಗಿ ತನಿಖೆ ನಡೆಸಿದ್ದೇವೆ. ಚುನಾವಣೆ ಮುನ್ನವೇ ಬಂಧಿಸಿದರೆ ಬೇರೆ ಸ್ವರೂಪ ಪಡೆದುಕೊಳ್ಳಬಹುದೆಂದು ಫಲಿತಾಂಶ ಮುಗಿಯುವವರೆಗೂ ಕಾದು ಕ್ರಮಕ್ಕೆ ಮುಂದಾದೆವು’ ಎಂದು ಸ್ಪಷ್ಟಪಡಿಸಿದರು.

**

ಫರೀದ್‌ಗೆ ಸೇರಿದ 12 ಬ್ಯಾಂಕ್ ಖಾತೆಗಳನ್ನು ಸ್ಥಗಿತ<br/>ಗೊಳಿಸಿದ್ದೇವೆ. ಆರೋಪಿಗಳು ಒಂದು ತಂಡವಾಗಿ ಅಪರಾಧ ಎಸಗಿರುವುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ.

-ಟಿ. ಸುನೀಲ್‌ಕುಮಾರ್, ಫೊಲೀಸ್ ಕಮಿಷನರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.