ADVERTISEMENT

ಹಿಜಾಬ್ ಪ್ರಕರಣ ಅದೊಂದು ಷಡ್ಯಂತ್ರ: ಸಚಿವ ಸಿ.ಸಿ ಪಾಟೀಲ

‘ವಕೀಲರ ಶುಲ್ಕ ತುಂಬುವಷ್ಟ ಸಬಲರಿದ್ದಾರೆಯೇ?’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 10:29 IST
Last Updated 12 ಫೆಬ್ರುವರಿ 2022, 10:29 IST
ಸಿ.ಸಿ ಪಾಟೀಲ
ಸಿ.ಸಿ ಪಾಟೀಲ   

ಬಾಗಲಕೋಟೆ: ಹಿಜಾಬ್ ನಿಷೇಧ ವಿರೋಧಿಸಿ ಹೈಕೋರ್ಟ್ ಮೆಟ್ಟಿಲು ಏರಿದ ಉಡುಪಿಯ ನಾಲ್ವರು ವಿದ್ಯಾರ್ಥಿನಿಯರು ವಕೀಲರ ಶುಲ್ಕ ಕೊಡುವಷ್ಟು ಆರ್ಥಿಕವಾಗಿ ಸಬಲರಿದ್ದಾರೆಯೇ? ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಇದನ್ನೆಲ್ಲ ಗಮನಿಸಿದರೆ ಚುನಾವಣೆ ಹೊತ್ತಿನಲ್ಲಿ ಇದೊಂದು ಷಡ್ಯಂತ್ರ ಅನ್ನಿಸುತ್ತಿದೆ.ಅನ್ನ, ನೀರು ಹಿಂದುಸ್ತಾನದ್ದು, ನಿಷ್ಠೆ ಪಾಕಿಸ್ತಾನಕ್ಕೆ ಎಂಬುದೆಲ್ಲ ಇನ್ನು ನಡೆಯೊಲ್ಲ‘ ಎಂದರು.

ಶ್ರೀಮಂತರ ಮಕ್ಕಳು ಸೂಟು–ಬೂಟು, ಬಡವರ ಮಕ್ಕಳು ಹರಿದ ಚಣ್ಣ (ಚಡ್ಡಿ)ಹಾಕಿಕೊಂಡು ಶಾಲೆಗೆ ಬರುತ್ತಾರೆ. ಆ ತಾರತಮ್ಯ ತಪ್ಪಿಸಲು ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಅದನ್ನು ಎಲ್ಲರೂ ಪಾಲಿಸಬೇಕು ಎಂದರು.

ADVERTISEMENT

ಶಾಲೆಗೆ ಹೋಗಿ ಮಕ್ಕಳು ನಮಾಜ್ ಮಾಡುವುದಾದರೆ ಅವರನ್ನು ಅಲ್ಲಿಗೆ ಏಕೆ ಕಳುಹಿಸಬೇಕು. ಮಸೀದಿಗೆ ಕಳುಹಿಸಬೇಕು. ನಾಳೆ ಇನ್ನೊಬ್ಬರು ಬಂದು ಭಜನೆ ಮಾಡುತ್ತಾರೆ. ಇದರಲ್ಲಿ ಸಣ್ಣ ಮಕ್ಕಳ ತಪ್ಪು ಎಂಬುದಕ್ಕಿಂತ ನಮಾಜ್ ಮಾಡಲು ಹಚ್ಚಿದವರು, ಪ್ರೇರಣೆ ಕೊಟ್ಟವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳು ಶಾಲೆಗೆ ಏಕೆ ಹೋಗಬೇಕು. ಹಿಜಾಬ್ ಅಥವಾ ಮತ್ತೊಂದು ಧಾರ್ಮಿಕ ಗುರುತು ಹಾಕಿಕೊಂಡು ಅವರು ಧರ್ಮಾಂದತೆಯ ಕಡೆಗೆ ಹೋಗಬೇಕೇ? ಇಲ್ಲವೇ ಶಾಲೆ ಕಲಿತು ಉತ್ತಮ ಸ್ಥಾನಮಾನ ಪಡೆಯಬೇಕೇ? ಎಂಬುದನ್ನುಪಾಲಕರು ಯೋಚಿಸಬೇಕು ಎಂದರು.

ಸರ್ವ ಜನಾಂಗದ ಶಾಂತಿಯ ತೋಟ ಎಂದು ನಾಡಗೀತೆ ಹಾಡುತ್ತೇವೆ. ಅದರಂತೆ ನಡೆದುಕೊಂಡು ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸಿ ಅವರನ್ನು ರಾಜ್ಯಕ್ಕೆ ಆಸ್ತಿ ಮಾಡಬೇಕು ಹೊರತು ಹೊರೆ ಮಾಡಬಾರದು ಎಂದು ಪೋಷಕರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.