ADVERTISEMENT

ಸಿ.ಡಿ ಪ್ರಕರಣದಿಂದ ಹಿಂದೆ ಸರಿಯುವಂತೆ ವಕೀಲರಿಗೆ ಆಮಿಷ: ಸಂತ್ರಸ್ತೆ ಪತ್ರ

ಕ್ರಮಕ್ಕೆ ಆಗ್ರಹಿಸಿ ನಗರ ಪೊಲೀಸ್ ಕಮಿಷನರ್‌ಗೆ ಸಂತ್ರಸ್ತೆ ಪತ್ರ

​ಪ್ರಜಾವಾಣಿ ವಾರ್ತೆ
Published 5 ಮೇ 2021, 20:00 IST
Last Updated 5 ಮೇ 2021, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ಸಿ.ಡಿ ಪ್ರಕರಣದಿಂದ ಹಿಂದೆ ಸರಿಯುವಂತೆ ನನ್ನ ವಕೀಲರಿಗೆ ಶಾಸಕ ರಮೇಶ ಜಾರಕಿಹೊಳಿ ಕಡೆಯವರು ಒತ್ತಡ ಹೇರುತ್ತಿದ್ದು, ಇದಕ್ಕಾಗಿ ಕೋಟ್ಯಂತರ ಹಣ ನೀಡುವುದಾಗಿ ಆಮಿಷವೊಡ್ಡುತ್ತಿದ್ದಾರೆ’ ಎಂದು ಆರೋಪಿಸಿ ಸಂತ್ರಸ್ತ ಯುವತಿ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಪತ್ರ ಬರೆದಿದ್ದಾರೆ.

‘ಕೊರೊನಾ ನೆಪ ನೀಡಿ ಪ್ರಕರಣದ ವಿಚಾರಣೆಗೆ ರಮೇಶ ಜಾರಕಿಹೊಳಿ ಗೈರಾಗುತ್ತಿದ್ದಾರೆ. ಈ ಸಂದರ್ಭ ದುರುಪಯೋಗ ಮಾಡಿಕೊಂಡು, ಸಾಕ್ಷ್ಯ ನಾಶ ಹಾಗೂ ಪ್ರಕರಣದಿಂದ ಹಿಂದೆ ಸರಿಸಲು ಒತ್ತಡ ತರುತ್ತಿದ್ದಾರೆ. ನನ್ನ ವಕೀಲ ಕೆ.ಎನ್.ಜಗದೀಶ್ ಅವರಿಗೆ ಪ್ರಕರಣದಿಂದ ಹಿಂದೆ ಸರಿಯಲು 15 ದಿನಗಳಿಂದ ಅನಾಮಧೇಯ ವ್ಯಕ್ತಿಗಳು ಆಮಿಷ ನೀಡುತ್ತಿದ್ದಾರೆ. ಈ ವಿಚಾರವನ್ನು ವಕೀಲರು ನನ್ನ ಗಮನಕ್ಕೆ ತಂದಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಮತ್ತೊಬ್ಬ ವಕೀಲ ಸೂರ್ಯ ಮುಕುಂದರಾಜ್ ಅವರಿಗೆ ಸೋಮವಾರ ವಾಟ್ಸ್‌ಆ್ಯಪ್‌ ಮೂಲಕ ಒಬ್ಬರು ಕರೆ ಮಾಡಿದ್ದು, ‘ನಾನು ಪ್ರದೀಪ್‌. ಅಮರನಾಥ್ ಜಾರಕಿಹೊಳಿ ಅವರ ಸ್ನೇಹಿತ. ನೀವು ಯುವತಿಗೆ ಪ್ರಕರಣ ವಾಪಸ್ ಪಡೆಯಲು ತಿಳಿಸಿದರೆ, ನಿಮಗೆ ದೊಡ್ಡಕೊಡುಗೆ ನೀಡಲಾಗುವುದು’ ಎಂದು ಆಮಿಷವೊಡ್ಡಿದ್ದಾರೆ. ಅನುಮಾನದಿಂದ ಕರೆ ಮಾಡಿದ ವ್ಯಕ್ತಿಯ ಮೂಲ ಪರಿಶೀಲಿಸಿದಾಗ ಆತನ ಹೆಸರು ಪ್ರಭು ಪಾಟೀಲ್ ಎಂದು ಪತ್ತೆಯಾಗಿದೆ’.

ADVERTISEMENT

‘ಈ ಕೇಸ್‌ ವಾಪಸ್‌ ಪಡೆಯಲು ವಕೀಲರ ಮುಖಾಂತರ ನನ್ನ ಮೇಲೆ ಒತ್ತಡ ತರಲು ರಮೇಶ ಮುಂದಾಗಿದ್ದಾರೆ. ಆಮಿಷ ನೀಡಲು ಕರೆ ಮಾಡಿದ್ದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಸಾಕ್ಷ್ಯ ನಾಶ ಹಾಗೂ ಪ್ರಕರಣದ ಮೇಲೆ ಪ್ರಭಾವ ಬೀರುತ್ತಿರುವ ರಮೇಶ ಅವರನ್ನು ಕೂಡಲೇ ಬಂಧಿಸಬೇಕು. ನನಗೆ ರಕ್ಷಣೆ ಒದಗಿಸಬೇಕು’ ಎಂದೂ ಪತ್ರದಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.