ADVERTISEMENT

ಶಮನಗೊಳ್ಳದ ಸಂಪುಟ ಬೇಗುದಿ: ಕಾಂಗ್ರೆಸ್‌ ನಾಯಕರಲ್ಲಿ ತಳಮಳ

ಶಾಸಕ ರಮೇಶ ಜಾರಕಿಹೊಳಿ ನಿಗೂಢ ನಡೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:53 IST
Last Updated 23 ಡಿಸೆಂಬರ್ 2018, 19:53 IST
   

ಬೆಂಗಳೂರು/ಬೆಳಗಾವಿ: ಸಚಿವ ಸಂಪುಟ ಪುನಾರಚನೆ ಬಳಿಕ ‘ದೋಸ್ತಿ’ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಅತೃಪ್ತಿಯ ಬೇಗುದಿ ರಾಜ್ಯ ನಾಯಕರಿಗೆ ‘ಕೈ’ಸುಡುವ ಆತಂಕ ಸೃಷ್ಟಿಸಿದೆ.

ಸಂಪುಟದಿಂದ ಕೈ ಬಿಟ್ಟ ಕಾರಣಕ್ಕೆ ಅಸಮಾಧಾನಗೊಂಡಿರುವ ರಮೇಶ ಜಾರಕಿಹೊಳಿ, ಭಾನುವಾರ ಕೂಡ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾದ ದೂರವಾಣಿ ಸಂಭಾಷಣೆಯ ತುಣುಕು ಬಹಿರಂಗಗೊಂಡಿದೆ.

ಸಚಿವ ಸ್ಥಾನ ಆಕಾಂಕ್ಷಿಗಳಿಗೆ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿ ತೃಪ್ತಿಪಡಿಸಲು ಕಾಂಗ್ರೆಸ್‌ ನಾಯಕರು ಪ್ರಯತ್ನ ನಡೆಸಿದ್ದರು. ಆದರೆ, ಇದರಿಂದ ತೃಪ್ತರಾಗದ ಕೆಲವು ಶಾಸಕರು ಹೈಕಮಾಂಡ್‌ ಮತ್ತು ರಾಜ್ಯ ನಾಯಕರ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಭಿನ್ನರೆಲ್ಲ ಒಂದಾಗಿ ರಮೇಶ ಜಾರಕಿಹೊಳಿ ಜೊತೆ ಕೈ ಜೋಡಿಸಿದರೆ ಮತ್ತು ಸಚಿವ ಸ್ಥಾನ ಕಳೆದುಕೊಂಡ ಪಕ್ಷೇತರ ಶಾಸಕ ಆರ್‌. ಶಂಕರ್‌ ಮತ್ತು ಮತ್ತೊಬ್ಬ ಪಕ್ಷೇತರ ಶಾಸಕ ನಾಗೇಶ ಸರ್ಕಾರ ವಿರುದ್ಧ ನಿಲುವು ತಾಳಿದರೆ ಕಂಟಕ ಎದುರಾಗಬಹುದು ಎಂಬ ತಳಮಳ ಕಾಂಗ್ರೆಸ್‌ ನಾಯಕರಲ್ಲಿದೆ.

ADVERTISEMENT

ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ, ಸಚಿವ ಸ್ಥಾನ ಹಂಚಿಕೆ ಮಾಡಲು ಅನುಸರಿಸಿದ ಮಾನದಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ರಮೇಶ ಜಾರಕಿಹೊಳಿ ರಾಜೀನಾಮೆ?: ದೂರವಾಣಿ ಕರೆ ಮಾಡಿದ ಆಪ್ತರೊಬ್ಬರು, ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದೀರಾ?’ ಎಂದು ರಮೇಶ ಜಾರಕಿಹೊಳಿ ಅವರನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಹೌದು, ರಾಜೀನಾಮೆ ನೀಡುತ್ತೇನೆ. ಇನ್ನೂ ದಿನಾಂಕ ನಿರ್ಧಾರವಾಗಿಲ್ಲ. ಈ ವಾರದಲ್ಲಿಯೇ ನೀಡುತ್ತೇನೆ’ ಎಂದಿದ್ದಾರೆ. ‘ನೀವೊಬ್ಬರೇ ರಾಜೀನಾಮೆ ಕೊಡುತ್ತೀರಾ. ನಿಮ್ಮ ಜೊತೆ ಯಾರಾದರೂ ಇದ್ದಾರೆಯೇ’ ಎಂಬ ಪ್ರಶ್ನೆಗೆ, ‘ನಂಬರ್ ಹೇಳಲು ಸಾಧ್ಯವಿಲ್ಲ. ಮುಂದಿನ ವಾರಕ್ಕೆ ಎಲ್ಲವೂ ಸರಿ ಹೋಗುತ್ತದೆ. ಕಾದು ನೋಡಿ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದಾರೆ.

ರಮೇಶ ಜಾರಕಿಹೊಳಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ನಂಬಿಕೆ ಕಾಂಗ್ರೆಸ್‌ ನಾಯಕರಲ್ಲಿದೆ. ಆದರೆ, ಅವರ ಜೊತೆಗೆ ಕೆಲವು ಅತೃಪ್ತ ಶಾಸಕರು ಗುರುತಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ರಮೇಶ ಜಾರಕಿಹೊಳಿ ಮುನಿಸಿಕೊಂಡಿಲ್ಲ’ ಎಂದರು.

‘ರಮೇಶ ಇದುವರೆಗೆ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರಿಗೆ ಸಚಿವರಾಗಲು ಬಹಳ ಆಸೆ ಇತ್ತು. ಆದರೆ, ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಅದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ’ ಎಂದರು.

‘ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಶಾಸಕ ಬಿ.ಸಿ. ಪಾಟೀಲ ಸಂಪರ್ಕದಲ್ಲಿದ್ದಾರೆ. ನಮ್ಮ ಜೊತೆಯೇ ಇದ್ದಾರೆ. ರಮೇಶ ಜೊತೆ ಇನ್ನೂ ಮಾತನಾಡಿಲ್ಲ. ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಖಾತೆ ಹಂಚಿಕೆ ಇಂದು?

ಸಂಪುಟಕ್ಕೆ ಸೇರಿರುವ ಎಂಟು ಹೊಸ ‌ಸಚಿವರಿಗೆ ಖಾತೆ ಹಂಚಿಕೆ ಕುರಿತಂತೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಜೊತೆ ರಾಜ್ಯ ಕಾಂಗ್ರೆಸ್‌ ನಾಯಕರು ಸೋಮವಾರ (ಡಿ.24) ಚರ್ಚೆ ನಡೆಸಲಿದ್ದಾರೆ. ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಆಗಲಿದೆ.

****

ಸಂಪುಟದಿಂದ ಕೈ ಬಿಟ್ಟಿದ್ದರಿಂದ ಯಾರೂ ಮುನಿಸಿಕೊಂಡಿಲ್ಲ. ಸಚಿವರ ಕಾರ್ಯವೈಖರಿ, ಸಾಧನೆ ಆಧರಿಸಿ ಲೋಕಸಭೆ ಚುನಾವಣೆ ಬಳಿಕ ಮತ್ತೆ ಸಂಪುಟ ಪುನಾರಚನೆ ಮಾಡಲಾಗುವುದು.

- ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ಯಾವ ದೃಷ್ಟಿಯಿಂದ ಸಚಿವ ಸ್ಥಾನ ನೀಡಿದ್ದಾರೆ ಎನ್ನುವುದು ಹಂಚಿಕೆ ಮಾಡಿದವರೇ ಹೇಳಬೇಕು. ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನವನ್ನೂ ಅವರೇ ಸರಿಪಡಿಸಬೇಕು.

- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ

ಹಿರಿಯರು ಎಂಬ ಕಾರಣಕ್ಕೆ ನನ್ನನ್ನು ಹೊರಗಿಡಲಾಗಿದೆ. ಪಕ್ಷದಲ್ಲಿ ಇಬ್ಬರು ಮೊದಲಿನಿಂದಲೂ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಸಮಯ ಬಂದಾಗ ಅವರ ಹೆಸರು ಬಹಿರಂಗಪಡಿಸುತ್ತೇನೆ.

- ರಾಮಲಿಂಗಾ ರೆಡ್ಡಿ, ಹಿರಿಯ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.