ADVERTISEMENT

ಮಹದಾಯಿ ಹೊರಗಿಟ್ಟು ಹುಲಿ ಅಭಯಾರಣ್ಯ: ಸಿಇಸಿ ಶಿಫಾರಸು

ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 20:22 IST
Last Updated 25 ನವೆಂಬರ್ 2025, 20:22 IST
<div class="paragraphs"><p>ಹುಲಿ ಅಭಯಾರಣ್ಯ</p></div>

ಹುಲಿ ಅಭಯಾರಣ್ಯ

   

ನವದೆಹಲಿ: ಮಹದಾಯಿ ವನ್ಯಜೀವಿಧಾಮವನ್ನು ಹೊರಗಿಟ್ಟು ನಾಲ್ಕು ವನ್ಯಜೀವಿಧಾಮಗಳನ್ನು ಸೇರಿಸಿ ಗೋವಾ ಹುಲಿ ಅಭಯಾರಣ್ಯ ಸ್ಥಾಪಿಸಬೇಕು ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿದೆ. 

ಮಹದಾಯಿ-ಕೋಟಿಗಾಂವ್ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಅಥವಾ ಯೋಜನೆಗಳನ್ನು ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್‌ನಲ್ಲಿ ನಿರ್ದೇಶನ ನೀಡಿತ್ತು. ಮಹದಾಯಿ ವನ್ಯಜೀವಿ ಅಭಯಾರಣ್ಯ ಮತ್ತು ಪಕ್ಕದ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಅಧಿಸೂಚನೆ ಹೊರಡಿಸುವ ಸಂಬಂಧ ಆರು ವಾರಗಳಲ್ಲಿ ಸಿಇಸಿ ವರದಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿತ್ತು.

ADVERTISEMENT

ಸಮಿತಿಯು 279 ಪುಟಗಳ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸೋಮವಾರ ಸಲ್ಲಿಸಿದೆ. ಗೋವಾ ಹುಲಿ ಅಭಯಾರಣ್ಯ ಸ್ಥಾಪಿಸಿ ಗೋವಾ ಸರ್ಕಾರ ಮೂರು ತಿಂಗಳಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದೂ ಸಿಇಸಿ ಶಿಫಾರಸು ಮಾಡಿದೆ. 

ಅಧಿಕ ಸಂಖ್ಯೆಯ ಮನೆಗಳು ಇರುವ ಭಗವಾನ್‌ ಮಹಾವೀರ ವನ್ಯಜೀವಿಧಾಮದ ದಕ್ಷಿಣ ಭಾಗ (ಸುಮಾರು 560 ಮನೆಗಳು) ಹಾಗೂ ಮಹದಾಯಿ ವನ್ಯಜೀವಿಧಾಮವನ್ನು (ಸುಮಾರು 612 ಮನೆಗಳು) ಹುಲಿ ಅಭಯಾರಣ್ಯದ ವ್ಯಾಪ್ತಿಗೆ ಸೇರಿಸಿಲ್ಲ. ಈ ಪ್ರದೇಶಗಳನ್ನು ಸೇರಿಸುವ ಮುನ್ನ ನಿರಂತರ ಜಾಗೃತಿ ಮೂಡಿಸಿ ವಿಸ್ತೃತ ಸಮುದಾಯ ಸಮಾಲೋಚನೆಗಳನ್ನು ನಡೆಸುವ ಅಗತ್ಯ ಇದೆ ಎಂದು ಸಮಿತಿ ಸ್ಪಷ್ಟಪಡಿಸಿದೆ. 

ಮಹದಾಯಿ ವನ್ಯಜೀವಿಧಾಮ ಹಾಗೂ ಆಸುಪಾಸಿನ ಪ್ರದೇಶಗಳನ್ನು ‘ಹುಲಿ ಅಭಯಾರಣ್ಯ’ವೆಂದು ಘೋಷಿಸಲು ಮೂರು ತಿಂಗಳಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಗೋವಾ ಸರ್ಕಾರಕ್ಕೆ 2023ರಲ್ಲಿ ನಿರ್ದೇಶನ ನೀಡಿತ್ತು. 

ವನ್ಯಜೀವಿಧಾಮ ಹಾಗೂ ಸಮೀಪದ ಅರಣ್ಯ ಭಾಗದಲ್ಲಿ ಜನವಸತಿಗಳಿವೆ ಹಾಗೂ ಹುಲಿಯು ಗೋವಾದ ಸ್ಥಳೀಯ ವನ್ಯಜೀವಿಯಲ್ಲ ಎಂಬ ಕಾರಣ ನೀಡಿ ಮೀಸಲು ಅರಣ್ಯವಾಗಿ ಘೋಷಿಸಲು ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.