ADVERTISEMENT

ಹೆಸರುಕಾಳು ಖರೀದಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 17:16 IST
Last Updated 24 ಆಗಸ್ಟ್ 2021, 17:16 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ    

ಬೆಂಗಳೂರು: ರಾಜ್ಯದಲ್ಲಿ 2021-22 ಸಾಲಿನ ಮುಂಗಾರು ಹಂಗಾಮಿನ ಹೆಸರುಕಾಳು ಖರೀದಿಯನ್ನು ಖರೀದಿ ಕೇಂದ್ರಗಳ ಮೂಲಕ ಕೂಡಲೇ ಆರಂಭಿಸಲು ಅನುಮೋದನೆ ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಕ್ತ ಮಾರುಕಟ್ಟೆಯಲ್ಲಿ ಹೆಸರುಕಾಳು ಬೆಲೆ ಸರಕಾರ ಘೋಷಿಸಿದ ಬೆಂಬಲ ಬೆಲೆಗಿಂತ ಕನಿಷ್ಠವಾಗಿದೆ. 2021-22 ರ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು ಕಾಳನ್ನು ಕನಿಷ್ಠ ಬೆಂಬಲ ಬೆಲೆಯನ್ವಯ ನೋಂದಾಯಿತ ರೈತರಿಂದ ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಿ 40,000 ಮೆಟ್ರಿಕ್ ಟನ್ ಹೆಸರುಕಾಳನ್ನು ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ ಎಂದಿದ್ದಾರೆ.

ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ಇದೇ ತಿಂಗಳು 18ರಂದು ಕೇಂದ್ರ ಕೃಷಿ ಇಲಾಖೆಗೆ ಪತ್ರ ಬರೆದು 2021-22 ರ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಮಾರುಕಟ್ಟೆಗೆ ಹೆಸರುಕಾಳು ಬರುತ್ತಿದ್ದು, ಕ್ವಿಂಟಾಲ್‌ಗೆ ರೂ. 3355 ರಿಂದ 7000 ಬೆಲೆಯಿದೆ. ಇದು ಸರ್ಕಾರ ಘೋಷಿತ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಇರುವುದರಿಂದ ರೈತರಿಗೆ ನಷ್ಟವಾಗುವುದರಿಂದ, ಅಲ್ಲದೇ ಮುಂಬರುವ ದಿನಗಳಲ್ಲಿ ಹೆಸರು ಕಾಳು ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಬೇಗನೆ ಖರೀದಿ ಕೇಂದ್ರ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.

ADVERTISEMENT

ಇಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ನನಗೆ ಈ ಬಗ್ಗೆ ಆದೇಶ ಪ್ರತಿ ಕಳುಹಿಸಿದ್ದು ಇದರ ವಿವರ ನೀಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ರೈತರ ಸಂಕಷ್ಟಗಳ ಕುರಿತು ರಾಜ್ಯ ಸರ್ಕಾರಕ್ಕೆ ಬೇಗನೆ ಪ್ರಸ್ತಾವನೆ ಸಲ್ಲಿಸಲು ಪತ್ರ ಬರೆದಿದ್ದಲ್ಲದೇ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುನೇನಕೊಪ್ಪ ಅವರೊಂದಿಗೆ ಜಿಲ್ಲಾ ಆಡಳಿತದ ನೇರ ಸಂಪರ್ಕದಲ್ಲಿತ್ತು ಎಂದು ಹೇಳಿದ್ದಾರೆ.

ಕೇಂದ್ರ ಕೃಷಿ ಸಚಿವರು ಈ ಬಗ್ಗೆ ಕರ್ನಾಟಕ ರಾಜ್ಯದ ಹೆಸರುಕಾಳು ಬೆಳೆದ ರೈತರ ಸಂಕಷ್ಟಗಳನ್ನು ಗಣನೆಗೆ ತೆಗೆದುಕೊಂಡು ಕೇವಲ 4 ದಿನಗಳಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಂಡಿದೆ. ಈ ಮೂಲಕರಾಜ್ಯದಲ್ಲಿ 40,000 ಮೆಟ್ರಿಕ್ ಟನ್ ಹೆಸರುಕಾಳನ್ನು ಬೆಂಬಲ ದರದಲ್ಲಿ ಖರೀದಿಸಿ 90 ದಿನಗಳಲ್ಲಿ ಸಮಗ್ರ ಪ್ರಕ್ರಿಯೆ ಮುಗಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೇ ಕೇಂದ್ರ ನೋಡಲ್ ಏಜೆನ್ಸಿ ಹೆಸರುಕಾಳು ಖರೀದಿ ಪ್ರಕ್ರಿಯೆ ಮುಗಿದ ದಿನದಿಂದ 15 ದಿನಗಳ ಅವಧಿಯಲ್ಲಿ ಖರೀದಿಸಿದ ಹೆಸರುಕಾಳನ್ನು ತೀರುವಳಿ ಮಾಡಬೇಕು ಎಂದಿದ್ದಾರೆ.

ರೈತರ ಹಿತ ಕಾಯುವ ಕೇಂದ್ರ ಸರಕಾರದ ಈ ಮಹತ್ವದ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸುವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.