ಡಿಕೆ ಶಿವಕುಮಾರ್
ಪ್ರಜಾವಾಣಿ ಚಿತ್ರ
ನವದೆಹಲಿ: ‘ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಸಂಸದರೊಂದಿಗೆ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಸಂಸದರು ರಾಜ್ಯದ ಸ್ವಾಭಿಮಾನ ಹಾಗೂ ಗೌರವ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ರಾಯಚೂರಿನಲ್ಲಿ ಏಮ್ಸ್ ಆರಂಭಿಸಬೇಕು ಎಂದು ಪ್ರಸ್ತಾಪ ಮಾಡಲಾಗಿತ್ತು. ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗಲೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಯಚೂರಿನಲ್ಲಿ ಜಾಗ ನೀಡುವುದು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಒಪ್ಪಿತ್ತು. ಆದರೆ, ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ’ ಎಂದರು.
‘ಎಲ್ಲ ವಿಚಾರಗಳಲ್ಲೂ ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಾ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿ. ಈ ಬಾರಿ ಬಜೆಟ್‌ನಲ್ಲಿ ಏಮ್ಸ್ ಘೋಷಣೆ ಮಾಡುತ್ತಾರೆ ಎಂದು ಭಾವಿಸಿದ್ದೆವು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ನಮ್ಮ ರಾಜ್ಯಕ್ಕೆ ಏಮ್ಸ್ ನೀಡಲೇಬಾರದು ಎಂದು ಕೇಂದ್ರ ತೀರ್ಮಾನಿಸಿದಂತಿದೆ. ಇದರ ವಿರುದ್ಧ ಸಂಸತ್ ಸದಸ್ಯರು ಹೋರಾಟಕ್ಕೆ ಮುಂದಾಗಿದ್ದಾರೆ. ಸಂಸದರಿಗೆ ಶಕ್ತಿ ತುಂಬಲು ಸರ್ಕಾರ ಕೂಡ ಹೋರಾಟ ಮಾಡಲಿದೆ. ರಾಯಚೂರಿಗೆ ಏಮ್ಸ್ ಘೋಷಣೆ ಮಾಡಬೇಕು ಎಂದು ನಾವು ಈಗಲೂ ಮನವಿ ಮಾಡುತ್ತೇವೆ’ ಎಂದರು.
ಜಿ.ಕುಮಾರ ನಾಯಕ ಮಾತನಾಡಿ, ‘ರಾಯಚೂರಿನಲ್ಲೇ ಏಮ್ಸ್ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಯವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಏಮ್ಸ್‌ಗಾಗಿ ಜಿಲ್ಲೆಯಲ್ಲಿ ಸಾವಿರ ದಿನಗಳಿಂದ ಹೋರಾಟ ನಡೆಯುತ್ತಿದೆ. ಕೇಂದ್ರಕ್ಕೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಲು ನಿಯೋಗ ಹೋಗಲಾಗುವುದು’ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ‘ಪಕ್ಷಾತೀತ ಹೋರಾಟ ಮಾಡಲು ತೀರ್ಮಾನಿಸಿದ್ದೆವು. ಸುದ್ದಿಗೋಷ್ಠಿಗೆ ಬರುವಂತೆ ಬಿಜೆಪಿ ಸಂಸದರಿಗೆ ಆಹ್ವಾನ ನೀಡಿದ್ದೆವು. ಅವರು ಬರಲಿಲ್ಲ. ಈ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.