ADVERTISEMENT

ಕೇಂದ್ರ– ರಾಜ್ಯ ಸರ್ಕಾರದ ಆರೋಗ್ಯಯೋಜನೆ ವಿಲೀನ ಚಿಂತನೆ: ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 17:52 IST
Last Updated 20 ಜೂನ್ 2018, 17:52 IST

ಬೆಂಗಳೂರು: ಕೇಂದ್ರ ಸರ್ಕಾರದ ‘ಆಯುಶ್ಮಾನ್‌ ಭಾರತ್’ ಮತ್ತು ರಾಜ್ಯ ಸರ್ಕಾರ ‘ಆರೋಗ್ಯ ಕರ್ನಾಟಕ’ ಈ ಎರಡೂ ಯೋಜನೆಗಳನ್ನು ವಿಲೀನಗೊಳಿಸುವ ಚಿಂತನೆ ಇದ್ದು, ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿ ಕೂಡಾ ಈ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ’ ಎಂದರು.

‘ಆರೋಗ್ಯ ಸೇವೆ ವಿಷಯದಲ್ಲಿ ಗೊಂದಲ ಮುಂದುವರಿದಿರುವುರಿಂದ ಯಶಸ್ವಿನಿ ಯೋಜನೆಯನ್ನು ಮೂರು ತಿಂಗಳು ವಿಸ್ತರಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ವಿತರಿಸುವ ಹೆಲ್ತ್‌ ಕಾರ್ಡ್‌ ಬಗ್ಗೆ ಜನರಲ್ಲಿ ಇನ್ನೂ ಜಾಗೃತಿ ಮೂಡಿಲ್ಲ. ಹೀಗಾಗಿ, ಸದ್ಯ ಬಿಪಿಎಲ್‌ ಅಥವಾ ಎಎವೈ ಕಾರ್ಡ್‌ ತೋರಿಸಿಯೂ ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ADVERTISEMENT

‘ಆರೋಗ್ಯ ಕರ್ನಾಟಕ ಯೋಜನೆಗೆ ಖಾಸಗಿ ಆಸ್ಪತ್ರೆಗಳಲ್ಲಿ ವಿಧಿಸಬೇಕಾದ ಚಿಕಿತ್ಸಾ ಶುಲ್ಕದ ಬಗ್ಗೆ ಒಮ್ಮತ ಮೂಡಿಲ್ಲ. ಈ ಯೋಜನೆಯಡಿ ಆಸ್ಪತ್ರೆಗಳು ನೋಂದಣಿ ಮಾಡಿಕೊಳ್ಳಲು ಇದೇ 30 ಕೊನೆಯ ದಿನ. ಈಗಾಗಲೇ ನೋಂದಣಿಯಾಗಿರುವ ಸುಮಾರು 800 ಆಸ್ಪತ್ರೆಗಳ ಪೈಕಿ, 400 ಆಸ್ಪತ್ರೆಗಳು ಶುಲ್ಕ ನಿಗದಿ ಬಗ್ಗೆ ಸಹಮತ ವ್ಯಕ್ತಪಡಿಸಿವೆ. ಇದೇ 26 ಅಥವಾ 27ರಂದು ಆಸ್ಪತ್ರೆಗಳ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿ, ಶುಲ್ಕ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.