ADVERTISEMENT

ಕೋವಿಡ್‌ ಲಸಿಕೆ ಪೂರೈಕೆಯಲ್ಲಿ ಕೇಂದ್ರದಿಂದ ತಾರತಮ್ಯ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2021, 16:59 IST
Last Updated 6 ಮೇ 2021, 16:59 IST
   

ಬೆಂಗಳೂರು: ಕೋವಿಡ್‌ ಲಸಿಕೆ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಗುಜರಾತ್‌ಗೆ ಹೆಚ್ಚು, ಕರ್ನಾಟಕಕ್ಕೆ ಅತಿ ಕಡಿಮೆ ಪೂರೈಸಲಾಗಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಬಗ್ಗೆ ಗುರುವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘18ರಿಂದ 44 ವರ್ಷದವರಿಗೆ ಲಸಿಕೆ ಹಾಕುವ ಅಭಿಯಾನ ಮೇ 1ರಿಂದ ಆರಂಭವಾಗಿದ್ದು, ಮಂಗಳವಾರದವರೆಗೆ 6 ಲಕ್ಷ ಜನರಿಗೆ ಲಸಿಕೆ ನೀಡಲಾಗಿತ್ತು. ಗುಜರಾತ್‌ನಲ್ಲಿ 1.61 ಲಕ್ಷ ಜನರಿಗೆ ಲಸಿಕೆ ನೀಡಿದ್ದರೆ, ರಾಜ್ಯದಲ್ಲಿ ಕೇವಲ 3,475 ಜನರಿಗೆ ಲಸಿಕೆ ಹಾಕಲಾಗಿದೆ’ ಎಂಬ ಅಂಕಿ ಅಂಶವನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕ ಮತ್ತು ಕನ್ನಡಿಗರಿಗೆ ತಾರತಮ್ಯ, ಗುಜರಾತ್‌ ಮೇಲೆ ಅತಿಯಾದ ಪ್ರೀತಿ ತೋರುತ್ತಿರುವುದು ಕೇಂದ್ರದ ಆರೋಗ್ಯ ಸಚಿವಾಲಯದ ಅಂಕಿಅಂಶಗಳಿಂದಲೇ ಬಹಿರಂಗವಾಗಿದೆ. ಸಂಕಷ್ಟದಲ್ಲೂ ಕೇಂದ್ರ ತಾರತಮ್ಯ ಮಾಡುತ್ತಿರುವುದು ಮನುಷ್ಯ ವಿರೋಧಿ ಧೋರಣೆ. ಕನ್ನಡಿಗರಿಗಾಗಿ ರಾಜ್ಯ ಸರ್ಕಾರ ಸೊಲ್ಲೆತ್ತದೆ ಇರುವುದು ಪರಮ ವೈಫಲ್ಯ ಎಂದು ಟೀಕಿಸಿದ್ದಾರೆ.

ADVERTISEMENT

ರಾಜ್ಯಕ್ಕೆ ಕೇಂದ್ರ ಸರ್ಕಾರ ಲಸಿಕೆ ನೀಡುತ್ತಿಲ್ಲವೆ? ಕೇಳಿ ಪಡೆಯುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲವೆ? ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಸಂಸದರು ಮೊದಲು ಈ ತಾರತಮ್ಯದ ವಿರುದ್ಧ ಹೋರಾಡಬೇಕು. ಈ ತಾರತಮ್ಯ, ವೈಫಲ್ಯಗಳನ್ನು ಜನರೂ ಪ್ರಶ್ನಿಸಬೇಕು. ಇಲ್ಲವಾದಲ್ಲಿ ಅಪಾಯದ ದಿನಗಳು ಮುಂದಿವೆ ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.