ADVERTISEMENT

ಕೇಂದ್ರದ ಕೈಗಾರಿಕಾ ವಸಾಹತು ಮಾದರಿ ಅನುಸರಿಸಿ: ಅಮರದೀಪ್‌ ಸಿಂಗ್‌ ಭಾಟಿಯಾ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 13:55 IST
Last Updated 2 ಆಗಸ್ಟ್ 2025, 13:55 IST
<div class="paragraphs"><p>ದುಂಡುಮೇಜಿನ ಸಭೆಯಲ್ಲಿ ಅಮರ್ ದೀಪ್ ಸಿಂಗ್ ಭಾಟಿಯಾ ಮಾತನಾಡಿದರು. ಎನ್‌.ಸೆಲ್ವಕುಮಾರ್ ಉಪಸ್ಥಿತರಿದ್ದರು</p></div>

ದುಂಡುಮೇಜಿನ ಸಭೆಯಲ್ಲಿ ಅಮರ್ ದೀಪ್ ಸಿಂಗ್ ಭಾಟಿಯಾ ಮಾತನಾಡಿದರು. ಎನ್‌.ಸೆಲ್ವಕುಮಾರ್ ಉಪಸ್ಥಿತರಿದ್ದರು

   

  –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕೇಂದ್ರ ಸರ್ಕಾರವು ರೂಪಿಸಿರುವ ಕೈಗಾರಿಕಾ ವಸಾಹತುಗಳ ಮಾದರಿಯನ್ನು ದಕ್ಷಿಣ ಭಾರತದ ರಾಜ್ಯಗಳು ಅಳವಡಿಸಿಕೊಳ್ಳಬೇಕು’ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿ ಅಮರದೀಪ್‌ ಸಿಂಗ್‌ ಭಾಟಿಯಾ ಸಲಹೆ ನೀಡಿದರು.

ADVERTISEMENT

‘ವಿಕಸಿತ ಭಾರತ@2047’ ಉಪಕ್ರಮದ ಭಾಗವಾಗಿ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ, ದಕ್ಷಿಣ ಭಾರತದ ಕೈಗಾರಿಕಾ ಇಲಾಖೆ ಮತ್ತು ಉದ್ಯಮ ಪ್ರತಿನಿಧಿಗಳ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

‘ಕೈಗಾರಿಕೆಗಳ ಸರಾಗ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತಹ ‘ಕೈಗಾರಿಕಾ ವಸಾಹತು’ ಮಾದರಿಯನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಕಾರ್ಯಕ್ರಮದ ಅಡಿ ಅಭಿವೃದ್ಧಿ‍ಪಡಿಸಲಾಗಿದೆ. ದೇಶದಾದ್ಯಂತ ಇಂತಹ 20 ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅವು ವಿಶಾಲವಾದ ರಸ್ತೆ, ನೆಲದಡಿಯ ವಿದ್ಯುತ್ ಜಾಲ, ಒಳಚರಂಡಿ, ಘನತ್ಯಾಜ್ಯ ಸಂಸ್ಕರಣಾ ಘಟಕ, ಕೊಳಚೆ ನೀರು ಸಂಸ್ಕರಣಾ ಘಟಕ, ಸೌರವಿದ್ಯುತ್ ಘಟಕಗಳನ್ನು ಹೊಂದಿರಲಿವೆ’ ಎಂದರು.

‘ಈ ಕೈಗಾರಿಕಾ ವಸಾಹತುಗಳ ಮಾದರಿಯನ್ನು ಆಯಾ ಕೈಗಾರಿಕಾ ವಲಯದ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಬಹುದಾಗಿದೆ. ಜವಳಿ ಕ್ಷೇತ್ರಕ್ಕೆ ಅಗತ್ಯವಿರುವಂತೆ ಕೆಲ ಸವಲತ್ತುಗಳನ್ನು ಸೇರಿಸಿಕೊಳ್ಳಬಹುದಾಗಿದೆ ಮತ್ತು ಅಗತ್ಯವಿಲ್ಲದ ಸವಲತ್ತುಗಳನ್ನು ಕೈಬಿಡಬಹುದಾಗಿದೆ. ಅದೇ ರೀತಿ ಸ್ಮಾರ್ಟ್‌ಫೋನ್‌ ಪಾರ್ಕ್‌, ಏರೋಸ್ಪೇಸ್‌ ಪಾರ್ಕ್‌, ಆಟೋ ಪಾರ್ಕ್‌ಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದರು.

ರಾಜ್ಯದ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ಸೆಲ್ವಕುಮಾರ್‌, ‘ಕೈಗಾರಿಕಾ ವಸಾಹತು ಅಥವಾ ಟೌನ್‌ಶಿಪ್‌ಗಳಲ್ಲಿ ಸಂಗ್ರಹವಾಗುವ ತೆರಿಗೆ ಹಣವು, ಅಲ್ಲಿಗೇ ಬಳಕೆಯಾಗುವುದಿಲ್ಲ. ಈ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ’ ಎಂದರು.

‘ವಿಶೇಷ ಹೂಡಿಕೆ ಪ್ರದೇಶಗಳಲ್ಲಿ (ಎಸ್‌ಐಆರ್‌) ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೇ ತೆರಿಗೆ ಸಂಗ್ರಹಿಸಲಿದೆ. ಅದರಲ್ಲಿ ಶೇ 30ರಷ್ಟನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ, ಶೇ 70ರಷ್ಟು ಮೊತ್ತವನ್ನು ಈ ‘ಎಸ್‌ಐಆರ್‌’ಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಿದೆ’ ಎಂದರು.

ಸಿಐಐ, ಅಸೋಚಾಂ, ಫಿಕ್ಕಿ, ಕಾಸಿಯಾ, ಪೀಣ್ಯ–ದಾಬಸ್‌ಪೇಟೆ, ವೈಟ್‌ಫೀಲ್ಡ್‌, ಹಾರೋಹಳ್ಳಿ, ವಸಂತನರಸಾಪುರ ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ದುಂಡುಮೇಜಿನ ಸಭೆಯಲ್ಲಿ ಭಾಗಿಯಾಗಿದ್ದರು. ತೆಲಂಗಾಣ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಪುದುಚೇರಿಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.