ADVERTISEMENT

ಕಡು ಬಡ ರಾಷ್ಟ್ರಗಳಿಗೆ ಲಸಿಕೆ ತಾರತಮ್ಯ: ಡಾ.ರಿಚರ್ಡ್‌ ಹ್ಯಾಚೆಟ್‌ ಬೇಸರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 16:54 IST
Last Updated 18 ನವೆಂಬರ್ 2021, 16:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ಲಸಿಕೆ ಪೂರೈಕೆಯಲ್ಲಿ ಕಡು ಬಡ ದೇಶಗಳು ತಾರತಮ್ಯ ಎದುರಿಸುವುದನ್ನು ತಡೆಯಲು 'ಸಾಂಕ್ರಾಮಿಕ ಸನ್ನದ್ಧತೆಯ ಆವಿಷ್ಕಾರಗಳಿಗಾಗಿ ಒಕ್ಕೂಟ'ವು (ಸೆಪಿ) ಸಾಕಷ್ಟು ಶ್ರಮಿಸಿದೆ. ಎಷ್ಟೇ ಪ್ರಯತ್ನಪಟ್ಟರೂ ಈ ವಿಚಾರದಲ್ಲಿ ಸಂಪೂರ್ಣ ಸಮಾನತೆ ಇನ್ನೂ ಸಾಧ್ಯವಾಗಿಲ್ಲ’ ಎಂದು ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ರಿಚರ್ಡ್‌ ಹ್ಯಾಚೆಟ್‌ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ತಂತ್ರಜ್ಞಾನ ಶೃಂಗ 2021ರಲ್ಲಿ ಅವರು ಲಸಿಕೆಯ ಸಮಾನ ಹಂಚಿಕೆ ಕುರಿತು ಗುರುವಾರ ಅಭಿಪ್ರಾಯ ಹಂಚಿಕೊಂಡರು.

‘ಅಮೆರಿಕ, ಇಂಗ್ಲೆಂಡ್‌, ಭಾರತ ಹಾಗೂ ಚೀನಾ ಮಾತ್ರ ಭಾರಿ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯ ಸಾಮರ್ಥ್ಯ ಹೊಂದಿವೆ. ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾ ಖಂಡಗಳ ದೇಶಗಳಲ್ಲಿ ಲಸಿಕೆ ಉತ್ಪಾದನಾ ಸಾಮರ್ಥ್ಯ ಕಡಿಮೆ ಇದೆ. ತಮ್ಮ ಪ್ರಜೆಗಳಿಗೆ ಆದ್ಯತೆ ಮೇರೆಗೆ ಲಸಿಕೆ ಸಿಗಬೇಕೆಂದು ಬಯಸಿದ ಬಲಾಢ್ಯ ರಾಷ್ಟ್ರಗಳು ಲಸಿಕೆಯನ್ನು ದಾಸ್ತಾನಿಟ್ಟುಕೊಂಡವು.ಇದರಿಂದಾಗಿ ಬಡ ಹಾಗೂ ಮಧ್ಯಮ ಆದಾಯದ ವರ್ಗದ ರಾಷ್ಟ್ರಗಳು ಲಸಿಕೆ ಪಡೆಯಲು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದರು.

ADVERTISEMENT

‘ಕೋವಿಡ್‌ ಸಾಂಕ್ರಾಮಿಕ ಕಾಣಿಸಿಕೊಂಡ ಆರಂಭದಲ್ಲೇ ಲಸಿಕೆ ರಾಷ್ಟ್ರವಾದದಿಂದ ಆಗಬಹುದಾದ ಅಪಾಯ ಗ್ರಹಿಸಿ, ಇದನ್ನು ತಪ್ಪಿಸಲು ಕಾರ್ಯಕ್ರಮ ರೂಪಿಸಿದ್ದೆವು. ಲಸಿಕೆ ತಾರತಮ್ಯ ತಡೆಯಬೇಕಾದರೆ ಇದರ ಸಂಶೋಧನೆಗೆ ಹಣಕಾಸು ಹೂಡಿಕೆ ವಿಧಾನವೂ ಸೇರಿದಂತೆ ಕೆಲವೊಂದು ರಚನಾತ್ಮಕ ಸವಾಲುಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ’ ಎಂದರು.

‘ದಕ್ಷಿಣ ಆಫ್ರಿಕಾದಲ್ಲಿ ಎಬೋಲಾ ಮಹಾಮಾರಿ ಕಾಣಿಸಿಕೊಂಡ ಬಳಿಕ ಸೆಪಿಯನ್ನು 2017ರಲ್ಲಿ ಸ್ಥಾಪಿಸಲಾಯಿತು. ಈ ಸೋಂಕನ್ನು ಹತ್ತಿಕ್ಕಿದ ಅನುಭವ ಆಧರಿಸಿ ಒಕ್ಕೂಟವು ಲಸಿಕೆ ಅಭಿವೃದ್ಧಿಪಡಿಸುವಿಕೆಗೆ ನೆರವಾಗುವ ಕಾರ್ಯದಲ್ಲಿ ತೊಡಗಿದೆ. ಭಾರತವೂ ಸೇರಿದಂತೆ ಅನೇಕ ದೇಶಗಳು ಈ ಕಾರ್ಯದಲ್ಲಿ ಕೈಜೋಡಿಸಿವೆ. ಕೋವಿಡ್‌ ನಿಯಂತ್ರಣಕ್ಕೆ ಎಂ–ಆರ್‌ಎನ್‌ಎ, ಡಿಎನ್‌ಎ ಹಾಗೂ ಪ್ರೊಟೀನ್‌ ಆಧರಿತ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ವಿವಿಧ ಯೋಜನೆಗಳಿಗೆ ಸಂಸ್ಥೆ ಬೆಂಬಲ ನೀಡಿದೆ. ನಮ್ಮ ಬೆಂಬಲದಿಂದ ಅಭಿವೃದ್ಧಿಗೊಂಡ ಕೊವ್ಯಾಕ್ಸ್‌ನಂತಹ ಲಸಿಕೆಗಳಿಂದಾಗಿ ಬಡ ರಾಷ್ಟ್ರಗಳು ಕೂಡಾ ಲಸಿಕೆ ಪಡೆಯಲು ಸಾಧ್ಯವಾಗುತ್ತಿದೆ’ ಎಂದರು.

‘ಲಸಿಕೆ ಅಡ್ಡಪರಿಣಾಮ- ಪರಿಹಾರಕ್ಕೆ ನಿಧಿ’

‘ಲಸಿಕೆ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಜಾಗತಿಕ ವ್ಯವಸ್ಥೆಗೆ ಬದ್ಧರಾಗಬೇಕಿದೆ. ಲಸಿಕೆಯಿಂದ ಅಡ್ಡ ಪರಿಣಾಮಗಳು ಉಂಟಾದರೆ, ಪರಿಹಾರ ನೀಡುವ ಹೊಣೆಯನ್ನು ವಹಿಸಿಕೊಳ್ಳಬೇಕಿದೆ. ಈ ಉದ್ದೇಶಕ್ಕಾಗಿಯೇ ಸೆಪಿ ಪ್ರತ್ಯೇಕ ನಿಧಿ ಸ್ಥಾಪಿಸಿದೆ. ಪಡೆಯುಲು ಸಿದ್ಧವಿರುವ ದೇಶಗಳಿಗೆಲ್ಲ ಲಸಿಕೆ ಲಭ್ಯವಾಗುವಂತೆ ಪೂರೈಕೆ ಮಾಡುವ ವ್ಯವಸ್ಥೆ ರೂಪಿಸಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನು ಮಾನ್ಯ ಮಾಡಿದೆ’ ಎಂದು ರಿಚರ್ಡ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.