ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿದ್ಯಾರ್ಥಿಸ್ನೇಹಿ ವಿಧಾನ ರೂಪಿಸಿದೆ. ಕಾಲೇಜು ಆಯ್ಕೆ ಮಾಡಿಕೊಂಡರೂ ಪ್ರವೇಶ ಪಡೆಯದ ವಿದ್ಯಾರ್ಥಿಗಳು ಮತ್ತೊಮ್ಮೆ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.
ಇದೇ ಮೊದಲ ಬಾರಿ ರೂಪಿಸಲಾದ ಹೊಸ ವಿಧಾನವನ್ನು 2025–26ನೇ ಸಾಲಿನಿಂದಲೇ ಅನ್ವಯಿಸಲಾಗುವುದು. ಪ್ರಕ್ರಿಯೆಯಿಂದ ಹೊರಹೋದವರು ₹750 ದಂಡ ಶುಲ್ಕ ಪಾವತಿಸಿ, ಮತ್ತೆ ಸೀಟು ಹಂಚಿಕೆಯ ಉಳಿದ ಸುತ್ತುಗಳಿಗೆ ಮರುಪ್ರವೇಶ ಪಡೆಯಬಹುದು.
ಎಂಜಿನಿಯರಿಂಗ್, ಬಿ.ಎಸ್‌ಸಿ ಕೃಷಿ, ಬಿ.ಎಸ್‌ಸಿ ನರ್ಸಿಂಗ್, ಪಶುವೈದ್ಯಕೀಯ, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮಾ ಮತ್ತು ಫಾರ್ಮಾ-ಡಿ, ಆರ್ಕಿಟೆಕ್ಚರ್, ಬಿಪಿಟಿ, ಬಿಪಿಒ, ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದ ವಿದ್ಯಾರ್ಥಿಗಳು ತಾವು ಪಡೆದ ರ್‍ಯಾಂಕಿಂಗ್‌ಗೆ ಅನುಗುಣವಾಗಿ ಆಯ್ಕೆ ಮಾಡಿಕೊಂಡ (ಆಫ್ಷನ್) ಕಾಲೇಜುಗಳು ದೊರೆತ ನಂತರ ಚಾಯ್ಸ್ 1 ನಮೂದಿಸಿ, ಕೆಇಎ ಖಾತೆಗೆ ಶುಲ್ಕ ಪಾವತಿಸುತ್ತಿದ್ದರು. ಅಂಥವರು ಆ ಕಾಲೇಜುಗಳಿಗೆ ಕಡ್ಡಾಯವಾಗಿ ಪ್ರವೇಶ ಪಡೆಯಬೇಕಿತ್ತು. ಒಂದು ವೇಳೆ ಪ್ರವೇಶ ಪಡೆಯದಿದ್ದರೆ ಅವರು ಆಯ್ಕೆ ಪ್ರಕ್ರಿಯೆಯಿಂದ ಹೊರಗೆ ಹೋಗುತ್ತಿದ್ದರು. ಶುಲ್ಕವನ್ನೂ ಕಳೆದುಕೊಳ್ಳುತ್ತಿದ್ದರು.
‘ಸೀಟು ಹಂಚಿಕೆಯಲ್ಲಿ ತಾವು ನಮೂದಿಸಿದ್ದ ಕಾಲೇಜು ಸಿಕ್ಕವರು ಚಾಯ್ಸ್ 1 ನಮೂದಿಸಿದರೆ, ಸಿಗದೇ ಇದ್ದವರು ಚಾಯ್ಸ್ 2, ಚಾಯ್ಸ್ 3 ನಮೂದಿಸಿ, ಮುಂದಿನ ಸುತ್ತಿನಲ್ಲಿ ಭಾಗವಹಿಸುತ್ತಾರೆ. ಹೀಗೆ ಮೂರು ಚಾಯ್ಸ್‌ಗಳ ಮೂಲಕ ಸೀಟು ಪಡೆಯುತ್ತಿದ್ದವರು ಶುಲ್ಕ ಪಾವತಿಸಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡರೂ, ಕಾಲೇಜುಗಳಿಗೆ ದಾಖಲಾದ ಬಗ್ಗೆ ಕೆಇಎಗೆ ಖಚಿತ ಮಾಹಿತಿ ಸಿಗುತ್ತಿರಲ್ಲ. ಇದು ‘ಸೀಟ್ ಬ್ಲಾಕಿಂಗ್’ ದಂಧೆಗೆ ದಾರಿ ಮಾಡಿಕೊಡುತ್ತಿತ್ತು. ಅಲ್ಲದೇ, ಸಕಾರಣದಿಂದ ಕಾಲೇಜಿಗೆ ದಾಖಲಾಗದ ವಿದ್ಯಾರ್ಥಿಗಳಿಗೂ ಒಂದು ವರ್ಷ ಹಾಗೂ ಶುಲ್ಕ ವ್ಯರ್ಥವಾಗುತ್ತಿತ್ತು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪುನರ್ ಪ್ರವೇಶದ ಅವಕಾಶ ಕಲ್ಪಿಸುವ ವಿಧಾನ ಪರಿಚಯಿಸಲಾಗುತ್ತಿದೆ’ ಎನ್ನುತ್ತಾರೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ.
ಕಾಲೇಜುಗಳ ಆಯ್ಕೆ ತಪ್ಪು ಚಾಯ್ಸ್ ನಮೂದಿಸಿದ ಹಲವು ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದರು. ಹೊಸ ವಿಧಾನದಿಂದ ಪ್ರತಿಭಾವಂತರಿಗೆ ಅನ್ಯಾಯವಾಗದು ಸೀಟ್ ಬ್ಲಾಕಿಂಗ್‌ಗೆ ಅವಕಾಶ ಇರದುಎಚ್. ಪ್ರಸನ್ನ ಕಾರ್ಯನಿರ್ವಾಹಕ ನಿರ್ದೇಶಕ ಕೆಇಎ
ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಕಾಲೇಜುಗಳನ್ನು ಆದ್ಯತೆಯ ಮೇಲೆ ನಮೂದಿಸಿದ್ದ ವಿದ್ಯಾರ್ಥಿಗಳಿಗೆ ತಾವು ಬಯಸಿದ ಕಾಲೇಜುಗಳು ಸಿಗದೇ ಇದ್ದಾಗ ಚಾಯ್ಸ್ 4 ನಮೂದಿಸಿ ಆಯ್ಕೆ ಪ್ರಕ್ರಿಯೆಯಿಂದ ಹೊರಗೆ ಹೋಗುತ್ತಾರೆ. ಕೆಲವೊಮ್ಮೆ ಕಣ್ತಪ್ಪಿನಿಂದ ಚಾಯ್ಸ್ 4 ನಮೂದಿಸಿದರೂ ಮುಂದಿನ ಸುತ್ತುಗಳಲ್ಲಿ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ. ಪ್ರತಿ ವರ್ಷವೂ ಇಂತಹ ಸಾವಿರಾರು ವಿದ್ಯಾರ್ಥಿಗಳು ಕೆಇಎ ಕಚೇರಿಗೆ ಅಲೆಯುತ್ತಿದ್ದರು. ಈಗ ಪರಿಚಯಿಸಿರುವ ಹೊಸ ವಿಧಾನದಲ್ಲಿ ಚಾಯ್ಸ್ 4 ನಮೂದಿಸಿದವರೂ ₹750 ದಂಡ ಪಾವತಿಸಿ ಮತ್ತೆ ಸೀಟು ಆಯ್ಕೆ ಮಾಡಿಕೊಳ್ಳಬಹುದು.
‘ಸೀಟ್ ಬ್ಲಾಕಿಂಗ್’ ದಂಧೆಯನ್ನು ಹತ್ತಿಕ್ಕಲು ಈ ಬಾರಿ ಹಲವು ಕ್ರಮಕೈಗೊಂಡಿರುವ ಕೆಇಎ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ಪತ್ರದ ಬದಲು ಸೀಟು ಖಚಿತತೆ ಪತ್ರ ನೀಡಲು ಮುಂದಾಗಿದೆ. ವಿವಿಧ ಕೋರ್ಸ್‌ಗಳಲ್ಲಿ ಕಾಲೇಜುಗಳು ಹಂಚಿಕೆಯಾದಾಗ ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿದ ನಂತರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದಿತ್ತು. ಆದರೆ ಅವರು ಪ್ರವೇಶ ಪಡೆದರೋ ಇಲ್ಲವೋ ಎನ್ನುವ ಖಚಿತ ಮಾಹಿತಿ ಕೆಇಎಗೆ ಸಿಗುತ್ತಿರಲಿಲ್ಲ. ಹಾಗಾಗಿ ಹಂಚಿಕೆಯಾದ ಸೀಟುಗಳನ್ನು ಬಿಟ್ಟು ಉಳಿದ ಸೀಟುಗಳನ್ನು ಮುಂದಿನ ಸುತ್ತಿಗೆ ಪರಿಗಣಿಸಲಾಗುತ್ತಿತ್ತು. ಈಗ ಹೊಸದಾಗಿ ಸಿದ್ಧಪಡಿಸಿದ ‘ಸೀಟು ಖಚಿತತೆ ಪತ್ರ’ ನೀಡುವುದರಿಂದ ವಿದ್ಯಾರ್ಥಿಗಳು ಆ ಕಾಲೇಜಿಗೆ ಕಡ್ಡಾಯವಾಗಿ ಹೋಗಬೇಕಾಗುತ್ತದೆ. ಅಲ್ಲಿಗೆ ಹೋಗದಿದ್ದರೆ ಆ ಸೀಟನ್ನು ಉಳಿಕೆ ಸೀಟು ಎಂದು ಪರಿಗಣಿಸಿ ಮುಂದಿನ ಸುತ್ತಿಗೆ ಪರಿಗಣಿಸಲಾಗುತ್ತದೆ. ಪ್ರವೇಶ ಪತ್ರದಲ್ಲೇ ನಕಲಿ ಅಭ್ಯರ್ಥಿಯ ಭಾವಚಿತ್ರ ಲಗತ್ತಿಸಿ ಪರೀಕ್ಷೆ ಬರೆಯುವ ಜಾಲವನ್ನು ನಿಯಂತ್ರಿಸಲು ಈ ವಿಧಾನ ಸಹಕಾರಿಯಾಗಲಿದೆ ಎನ್ನುತ್ತದೆ ಕೆಇಎ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.