ADVERTISEMENT

ಸಿಇಟಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್‌

ಹೊಸ ರ‍್ಯಾಂಕ್ ಪಟ್ಟಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 19:45 IST
Last Updated 3 ಸೆಪ್ಟೆಂಬರ್ 2022, 19:45 IST
ಹೈಕೋರ್ಟ್‌
ಹೈಕೋರ್ಟ್‌    

ಬೆಂಗಳೂರು: ‘ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ, ‘2020-21ನೇ ಸಾಲಿನಲ್ಲಿ ದ್ವಿತೀಯ ಪಿಯು ತೇರ್ಗಡೆಯಾದ ವಿದ್ಯಾರ್ಥಿಗಳು ಗಳಿಸಿದ ಶೇ 50 ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪಡೆದ ಶೇ 50ರಷ್ಟು ಅಂಕಗಳನ್ನು ಪರಿಗಣಿಸಿ ಹೊಸದಾಗಿರ‍್ಯಾಂಕ್ ಪಟ್ಟಿ ಪ್ರಕಟಿಸಬೇಕು‘ ಎಂದುಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಚಿಕ್ಕಮಗಳೂರಿನ ಆರ್‌. ಈಶ್ವರ್‌ ಸೇರಿದಂತೆ 50 ವಿದ್ಯಾರ್ಥಿಗಳು ಸಲ್ಲಿಸಿದ್ದ ಏಳು ಪ್ರತ್ಯೇಕ ರಿಟ್‌ ಅರ್ಜಿಗಳ ಮೇಲಿನ ಕಾಯ್ದಿರಿಸಿದ್ದ ತೀರ್ಪನ್ನುನ್ಯಾಯಮೂರ್ತಿ ಎಸ್‌. ಆರ್‌. ಕೃಷ್ಣಕುಮಾರ್‌ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ಪ್ರಕಟಿಸಿದ್ದು ವಿದ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿದೆ.‘ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಲಾಗದು‘ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2022 ಜುಲೈ 30ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.

‘ಕೆಇಎ ಆದೇಶವು ಸ್ವೇಚ್ಛೆಯಿಂದ ಕೂಡಿದ್ದು, ಅತಾರ್ಕಿಕವಾಗಿದೆ ಮತ್ತು ವಿವೇಚನಾಯುತವಾಗಿಲ್ಲ. ಸಿಇಟಿ-2022ರ ಮೌಲ್ಯಮಾಪನವು ಪುನರಾವರ್ತಿತ ವಿದ್ಯಾರ್ಥಿಗಳಿಗೆ ತಾರತಮ್ಯಎಸಗುವಂತಿದೆ’ ಎಂಬ ಅರ್ಜಿದಾರರ ವಾದ
ವನ್ನು ಎತ್ತಿ ಹಿಡಿದಿರುವ ನ್ಯಾಯಪೀಠ, ‘ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಕರ್ನಾಟಕ ಅಭ್ಯರ್ಥಿಗಳ ಆಯ್ಕೆ ನಿಯಮಗಳು-2006ರ ಅನುಸಾರ ರಿ–ಡೂ ಮಾಡಬೇಕು’ ಎಂದು ನಿರ್ದೇಶಿಸಿದೆ.

ADVERTISEMENT

‘ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿ ಅಂಕಗಳನ್ನು ಪರಿಗಣಿಸದೇ ಸಿಇಟಿ ರ‍್ಯಾಂಕ್ ಪಟ್ಟಿ ಪ್ರಕಟಿಸಿರುವುದು ಸಿಇಟಿ-2006ರ ಪ್ರವೇಶ ನಿಯಮಗಳ ಉಲ್ಲಂಘನೆಯಾಗಿದೆ. ಇದರಿಂದ, ಪುನರಾವರ್ತಿತ ವಿದ್ಯಾರ್ಥಿಗಳ ರ‍್ಯಾಂಕಿಂಗ್‌ ಶ್ರೇಣಿ ಕಡಿಮೆಯಾಗಲಿದೆ’ ಎಂದು ಅರ್ಜಿದಾರ ವಿದ್ಯಾರ್ಥಿಗಳು ಆಕ್ಷೇಪಿಸಿದ್ದರು.

ಕಳೆದ ವಿಚಾರಣೆ ವೇಳೆ ನ್ಯಾಯಪೀಠವು, ‘ಪಿಯು ಮತ್ತು ಸಿಇಟಿ ಅಂಕಗಳನ್ನು 25:75ರ ಅನುಪಾತದಲ್ಲಿ ಪರಿಗಣಿಸುವ ಮೂಲಕ ಸಹಮತದ ಸೂತ್ರವನ್ನು ಕಂಡುಕೊಳ್ಳಬಹುದು‘ ಎಂದು ಸರ್ಕಾರಕ್ಕೆ ಸಲಹೆ ನೀಡಿತ್ತು. ಆದರೆ, ಸರ್ಕಾರ ಈ ಸಲಹೆಯನ್ನು ಒಪ್ಪಿಲ್ಲ.ಅರ್ಜಿದಾರರ ಪರ ಹಿರಿಯ ವಕೀಲರಾದ ಎ.ಎಸ್‌.ಪೊನ್ನಣ್ಣ, ಡಿ. ಆರ್‌. ರವಿಶಂಕರ್‌, ಎಸ್‌.ಬಸವರಾಜ್‌, ಕೆಇಎ ಪರ ಎನ್‌.ಕೆ.ರಮೇಶ್‌ ಮತ್ತು ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪವಾದ ಮಂಡಿಸಿದ್ದರು. ಅರ್ಜಿದಾರ ವಿದ್ಯಾರ್ಥಿಗಳ ಪರವಾಗಿ ಶತಭಿಷ ಶಿವಣ್ಣ ವಕಾಲತ್ತು ವಹಿಸಿದ್ದರು.

ಕೋವಿಡ್‌ ಕಾರಣಕ್ಕೆ 2020– 21ನೇ ಸಾಲಿನಲ್ಲಿ ಪರೀಕ್ಷೆ ನಡೆಯದ ಕಾರಣ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿತ್ತು. ಅಂತಹ ವಿದ್ಯಾರ್ಥಿಗಳಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಪಡೆದ 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿಯೂ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.