ADVERTISEMENT

ಇದೇ 20ರಂದು ಸಿಇಟಿ ಫಲಿತಾಂಶ: ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 20:50 IST
Last Updated 17 ಆಗಸ್ಟ್ 2020, 20:50 IST
ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ    

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಇದೇ 20ರಂದು ಪ್ರಕಟವಾಗಲಿದೆ. ಕೋವಿಡ್‌ ಮತ್ತು ಪ್ರವಾಹ ಸಂಕಷ್ಟದ ಕಾರಣ ಎಂಜಿನಿಯರಿಂಗ್‌ ಸೀಟುಗಳ ಹಂಚಿಕೆ ಅನುಪಾತ ಮತ್ತು ಶುಲ್ಕ ಸ್ವರೂಪ ಕಳೆದ ವರ್ಷದಂತೆಯೇ ಈ ವರ್ಷವೂ ಮುಂದುವರಿಯಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಎಂಜಿನಿಯರಿಂಗ್‌ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಕಾಮೆಡ್‌-ಕೆ, ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘ ಹಾಗೂ ರಾಜ್ಯ ಧಾರ್ಮಿಕ ಅಲ್ಪಸಂಖ್ಯಾತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘದ ಪ್ರತಿನಿಧಿಗಳ ಜೊತೆ ಸೋಮವಾರ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

45:30:25 ಅನುಪಾತ: ‘ಎಂಜಿನಿಯರಿಂಗ್ ಕಾಲೇಜುಗಳು ಶೇ 45ರಷ್ಟು ಸೀಟುಗಳನ್ನು ಸರ್ಕಾರಕ್ಕೆ ನೀಡಿದರೆ, ಶೇ 30ರಷ್ಟು ಸೀಟುಗಳನ್ನು ಕಾಮೆಡ್‌-ಕೆಗೆ ಹಂಚಿಕೆ ಮಾಡಲಾಗುತ್ತದೆ. ಶೇ 25ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರು, ಆಡಳಿತ ಮಂಡಳಿ ಕೋಟಾಗೆ ಮೀಸಲಿಡಲಾಗಿದೆ. ಇನ್ನು ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಕ್ರಮವಾಗಿ ಶೇಕಡಾ 40:30:30ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಶೇ 40ರಷ್ಟು ಸೀಟುಗಳು ಸರ್ಕಾರಕ್ಕೆ, ಶೇ 30ರಷ್ಟು ಸೀಟು ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾಗುತ್ತದೆ. ಉಳಿದ ಶೇ 30ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರು, ಆಡಳಿತ ಮಂಡಳಿ ಕೋಟಾಗೆ ನೀಡಲಾಗುತ್ತದೆ ಎಂದು ವಿವರಿಸಿದರು.

ADVERTISEMENT

ಆನ್‌ಲೈನ್‌ ಕೌನ್ಸೆಲಿಂಗ್:‌ ‘ಅಕ್ಟೋಬರ್ ಒಳಗೆ ಆನ್‌ಲೈನ್‌ ಕೌನ್ಸೆಲಿಂಗ್‌ ನಡೆಯಲಿದೆ. ವಿದ್ಯಾರ್ಥಿಗಳು ತಾವಿದ್ದ ಜಾಗದಿಂದಲೇ ಕೌನ್ಸೆಲಿಂಗ್‌ಗೆ ಹಾಜರಾಗಬಹುದು. ಕಾಲೇಜು ಆಯ್ಕೆ ಮಾಡಿಕೊಂಡ ಬಳಿಕ ಆಯಾ ಕಾಲೇಜಿಗೆ ತೆರಳಿ ಪ್ರವೇಶ ಪಡೆಯಬೇಕು. ಎರಡು ಸುತ್ತು ಕೌನ್ಸೆಲಿಂಗ್‌ ಮತ್ತು ಒಂದು ಬಾರಿ ವಿಸ್ತರಿತ ಕೌನ್ಸೆಲಿಂಗ್‌ ಇರುತ್ತದೆ. ಅದರ ಹೊರತಾಗಿ ಹೆಚ್ಚುವರಿ ಕೌನ್ಸೆಲಿಂಗ್‌ ಈ ಬಾರಿ ಇರುವುದಿಲ್ಲ’ ಎಂದರು.

ಶುಲ್ಕ ಬದಲಾವಣೆ ಇಲ್ಲ
ಶುಲ್ಕಕ್ಕೆ ಸಂಬಂಧಿಸಿದಂತೆ, ಒಂದು ಸಂರಚನೆಯಲ್ಲಿ, ಸಿಇಟಿ ವಿದ್ಯಾರ್ಥಿಗಳಿಗೆ ತಲಾ ₹ 65,360 ಹಾಗೂ ಕಾಮೆಡ್-ಕೆ ವಿದ್ಯಾರ್ಥಿಗಳಿಗೆ ₹ 1,43,748 ನಿಗದಿ ಮಾಡಲಾಗಿದೆ. ಇನ್ನೊಂದರಲ್ಲಿ ಸಿಇಟಿ ವಿದ್ಯಾರ್ಥಿಗಳಿಗೆ ₹ 58,806 ಹಾಗೂ ಕಾಮೆಡ್‌-ಕೆ ವಿದ್ಯಾರ್ಥಿಗಳಿಗೆ
₹ 2,01,960 ನಿಗದಿ ಮಾಡಲಾಗಿದೆ’ ಎಂದುಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.