ADVERTISEMENT

ಸಿಇಟಿ: ಹೊಸ ಆಯ್ಕೆ ದಾಖಲಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 20:11 IST
Last Updated 18 ಡಿಸೆಂಬರ್ 2020, 20:11 IST

ಬೆಂಗಳೂರು: ಹಲವು ಕೋರ್ಸ್‌ಗಳ ಪ್ರವೇಶಾತಿಗೆ ಲಭ್ಯವಿರುವ ಸೀಟುಗಳಿಗೆ ಹೊಸದಾಗಿ ಆಯ್ಕೆ ದಾಖಲಿಸಲು (ಆಪ್ಷನ್‌ ಎಂಟ್ರಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಈ ಕುರಿತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

2020ನೇ ಸಾಲಿನಲ್ಲಿ ಸಿಇಟಿ ಬರೆದವರು ಎಂಜಿನಿಯರಿಂಗ್, ಟೆಕ್ನಾಲಜಿ, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ಫಾರ್ಮಸಿ, ಪಶುಸಂಗೋಪನೆ, ಬಿ.ಫಾರ್ಮಾ, ನ್ಯಾಚುರೋಪಥಿ, ಯೋಗ ಇತ್ಯಾದಿ ಕೋರ್ಸುಗಳ ಪ್ರವೇಶಾತಿಗೆ ಹೊಸ ಆಯ್ಕೆಯನ್ನು ದಾಖಲಿಸಬಹುದು.

ಸೀಟ್‌ ಮ್ಯಾಟ್ರಿಕ್ಸ್‌ ಮತ್ತು ಶುಲ್ಕದ ವಿವರವನ್ನು ಇದೇ 20ರ ಬೆಳಿಗ್ಗೆ 11ರ ನಂತರ ಪ್ರಕಟಿಸಲಾಗುತ್ತದೆ. 19ರ ಬೆಳಿಗ್ಗೆ 11ರಿಂದ 21ರ ಬೆಳಿಗ್ಗೆ 11ರವರೆಗೆ ಹೊಸದಾಗಿ ಆಯ್ಕೆ ದಾಖಲಿಸಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಅವಶ್ಯವಿದ್ದಲ್ಲಿಆಯ್ಕೆಗಳನ್ನು ಬದಲಾಯಿಸಬಹುದು, ಸೇರಿಸಬಹುದು ಅಥವಾ ಅಳಿಸಬಹುದಾಗಿದೆ.

ADVERTISEMENT

ಅಭ್ಯರ್ಥಿಗಳು ಮೊದಲೇ ಸುತ್ತಿನಲ್ಲಿ ಮತ್ತು ಎರಡನೇ ಸುತ್ತಿನಲ್ಲಿ ತಮಗೆ ದೊರೆತಿರುವ ಸೀಟುಗಳನ್ನು ಡಿ.22ರ ಸಂಜೆ 5ರೊಳಗಾಗಿ ರದ್ದು ಪಡಿಸಿಕೊಳ್ಳಬಹುದಾಗಿದೆ. ಅಂತಹ ಅಭ್ಯರ್ಥಿಗಳ ಶುಲ್ಕದ ಮೊತ್ತದಲ್ಲಿ ₹5 ಸಾವಿರ ಕಡಿತಗೊಳಿಸಿ ಉಳಿದ ಮೊತ್ತ ಹಿಂದಿರುಗಿಸಲಾಗುತ್ತದೆ. ನಂತರ, ಎರಡನೇ ಮುಂದುವರಿದ ಸೀಟು ಹಂಚಿಕೆಯ ಫಲಿತಾಂಶವನ್ನು 22ರಂದು ಸಂಜೆ 6ರ ನಂತರ ಪ್ರಕಟಿಸಲಾಗುತ್ತದೆ. ಈ ಸುತ್ತಿನಲ್ಲಿ ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಫಲಿತಾಂಶವನ್ನು 23ರಂದು ಪ್ರಕಟಿಸಲಾಗುತ್ತದೆ.

ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಪ್ರಕ್ರಿಯೆ 23ರಿಂದ ಆರಂಭವಾಗಲಿದ್ದು, 26ರ ಸಂಜೆ 5.30ರೊಳಗೆ ಅಭ್ಯರ್ಥಿಗಳು ಪ್ರವೇಶ ಪಡೆಯಬೇಕು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಮಾಹಿತಿಗೆ, http://kea.kar.nic.in ವೆಬ್‌ಸೈಟ್‌ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.