ADVERTISEMENT

ಸಕಾಲಕ್ಕೆ ಬಾರದ ಪರಿಹಾರ ಯಾವ ಪುರುಷಾರ್ಥಕ್ಕೆ?: ಸೂಲಿಬೆಲೆ ಆಕ್ರೋಶ

ಡಿವಿಎಸ್‌ ಟ್ವೀಟ್‌ಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 15:58 IST
Last Updated 3 ಅಕ್ಟೋಬರ್ 2019, 15:58 IST
   

ಬೆಂಗಳೂರು:ಪ್ರವಾಹ ಪರಿಹಾರದ ಕುರಿತು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು ಟ್ವಿಟರ್‌ನಲ್ಲಿಹಂಚಿಕೊಂಡಿದ್ದ ಅಭಿಪ್ರಾಯವೊಂದಕ್ಕೆ ಯುವ ಬ್ರಿಗೇಡ್‌ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅಗತ್ಯವಿದ್ದಾಗ ಬಾರದ ಪರಿಹಾರ ಯಾವ ಪುರುಷಾರ್ಥಕ್ಕೆ?’ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

‘ಪ್ರವಾಹ ಪೀಡಿತ ಪ್ರದೇಶಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಇಲ್ಲ ಸಲ್ಲದ ಕಥೆ ಹೇಳಿ, ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿರುವವರ ಬಗ್ಗೆ ನಮಗೆ ಕನಿಕರವಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಆಗಬೇಕಾದ ತಕ್ಷಣ ಪರಿಹಾರ, ಮಧ್ಯಂತರ ಪರಿಹಾರ ಮತ್ತು ದೀರ್ಘಕಾಲೀನ ಪರಿಹಾರದ ಬಗ್ಗೆ ಬೇಕಾದ ವರದಿಗಳನ್ನು ತಯಾರಿಸಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ಈಗಾಗಲೇ ಮಾಹಿತಿ ನೀಡಿದ್ದಾರೆ’ ಎಂದು ಸದಾನಂದ ಗೌಡ ಅವರು ಟ್ವೀಟ್‌ ಮಾಡಿದ್ದರು.

‘ಓ ಇವರು ಈಗ ಬಂದಿದ್ದಾರೆ. ಸದಾನಂದ ಗೌಡರೇ, ನೊಂದಿರುವ ಉತ್ತರ ಕರ್ನಾಟಕದ ಜನರನ್ನು ದಾರಿ ತಪ್ಪಿಸುವವರು ಎನ್ನುವಷ್ಟು ದಾರ್ಷ್ಟ್ಯ ತೋರಿರುವ ನಿಮ್ಮ ಬಗ್ಗೆ ನಾಡಿಗೇ ಕನಿಕರವಿದೆ. ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ. ಪ್ರವಾಹ ಕಳೆದು ಜನ ಬದುಕು ಕಟ್ಟಿಕೊಳ್ಳುವ ಕಾಲಕ್ಕೂ ಬಾರದ ಪರಿಹಾರ ಯಾವ ಪುರುಷಾರ್ಥಕ್ಕೆ?’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಂಟಾದ ಪ್ರವಾಹದಿಂದ ಉಂಟಾದ ಹಾನಿಗೆ ಕೇಂದ್ರದಿಂದ ಪರಿಹಾರ ಈ ವರೆಗೆ ಸಿಕ್ಕಿಲ್ಲ. ಇದೇ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಸೇರಿದಂತೆ ಹಲವರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷವನ್ನು ಟೀಕೆಗೆ ಗುರಿಪಡಿಸಿದ್ದಾರೆ. ಈ ಟೀಕೆಗಳಿಗೆಲ್ಲ ಉತ್ತರ ಕೊಡಲು ಹೋದ ಡಿವಿ ಸದಾನಂದ ಗೌಡರು, ಟೀಕೆ ಮಾಡುವವರು ಜನರ ದಾರಿ ತಪ್ಪಿಸುವರು ಎಂಬರ್ಥದಲ್ಲಿ ಮಾತನಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.