ADVERTISEMENT

ಬಿಜೆಪಿಗೂ ಹಬ್ಬಿದ ಕಾಲೆಳೆಯವ ಸಾಂಕ್ರಾಮಿಕ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 14:46 IST
Last Updated 25 ಅಕ್ಟೋಬರ್ 2025, 14:46 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಟಿಕೆಟ್‌ ವಂಚಿತ ಆಕಾಂಕ್ಷಿಗಳು ಕಾಲೆಳೆಯುವ ಸಾಂಕ್ರಾಮಿಕ ಬಿಜೆಪಿಗೂ ಹರಡಿರುವುದು ವಿಷಾದಕರ ಸಂಗತಿ. ಇಂತಹ ನಡವಳಿಕೆ ತೊಲಗಬೇಕು ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಪ್ರಮುಖರ ‘ಸಂಕಲ್ಪ’ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಟಿಕೆಟ್ ವಂಚಿತ ಅಭ್ಯರ್ಥಿಗಳು ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸುವ ಸಂಸ್ಕೃತಿ ಕಾಂಗ್ರೆಸ್‌ನಲ್ಲಿದೆ. ಬಿಜೆಪಿ ಶಿಸ್ತು, ಮೌಲ್ಯಗಳಿಗೆ ಹೆಸರಾದ ಪಕ್ಷ. ರಾಷ್ಟ್ರೀಯತೆ, ದೇಶಾಭಿಮಾನವೇ ಧ್ಯೇಯವಾಗಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿಗಳನ್ನು ಬಿಜೆಪಿ‌ಗರೇ ಸೋಲಿಸುವ ಕುತಂತ್ರಗಳು ಇತ್ತೀಚೆಗೆ ನಡೆಯುತ್ತಿವೆ. ಇಂತಹ ಅಸಹನೀಯ ಬೆಳವಣಿಗೆಗಳನ್ನು ತಡೆಯಲು ಅಗತ್ಯ ಕ್ರಮ ವಹಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಬಹುದೊಡ್ಡ ನಷ್ಟವಾಗುತ್ತದೆ ಎಂದರು.

ವಿಧಾನಪರಿಷತ್‌ ವಿರೋಧ ಪಕ್ಷದ ಮುಖ್ಯಸಚೇತಕ ಎನ್‌.ರವಿಕುಮಾರ್‌ ಮಾತನಾಡಿ, ‘ಕಂದಾಯ ಇಲಾಖೆಯ ಇ–ಖಾತಾ, ಬಿ‌–ಖಾತಾ, ಎ–ಖಾತಾ ಸೇರಿದಂತೆ ಎಲ್ಲಾ ಮೇಳಗಳು ಭ್ರಷ್ಟಾಚಾರದ ಮೂಲಗಳಾಗಿವೆ. ನಗರದ ರಸ್ತೆ ಗುಂಡಿಗಳನ್ನು ಮುಚ್ಚಲಾಗದ ಸರ್ಕಾರದಿಂದ ರಾಜ್ಯದ ಜನತೆ ಏನನ್ನೂ ನಿರೀಕ್ಷಿಸಲಾಗದು’ ಎಂದು ಟೀಕಿಸಿದರು.

ADVERTISEMENT

ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ‌.ತಮ್ಮೇಶ್ ಗೌಡ, ಬೆಂಗಳೂರು ಉತ್ತರ‌ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಹರೀಶ್‌, ಮಹಿಳಾ ಆಯೋಗದ ಮಾಜಿ‌ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ‌ಹನುಮಂತಗೌಡ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಬಿಜೆಪಿ ‌ಮುಖಂಡ ಪಿ.ಕೆ.ರಾಜಗೋಪಾಲ್‌, ಬಿಬಿಎಂಪಿ ಮಾಜಿ ಸದಸ್ಯೆ ಕುಸುಮ ಮಂಜುನಾಥ್‌, ಬೇಗೂರು ಮಹೇಶ್, ಬಿ.ಎಸ್.ಅನಿಲ್ ಕುಮಾರ್, ಮುನಿಹನುಮಯ್ಯ ಉಪಸ್ಥಿತರಿದ್ದರು.

ಕೆಂಪೇಗೌಡರ ಬೆಂಗಳೂರನ್ನು ಐದು ಭಾಗ ಮಾಡಿದ ಕಾಂಗ್ರೆಸ್‌ ಜನರ ಮನಸ್ಸಿನಿಂದ ದೂರವಾಗಿದೆ. ಆದರೂ ಅವರ ಆಡಳಿತವನ್ನು ಇನ್ನೂ ಎರಡೂವರೆ ವರ್ಷ ಸಹಿಸಿಕೊಳ್ಳುವುದು ಅನಿವಾರ್ಯ 
- ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ