ADVERTISEMENT

ಸಿದ್ದರಾಮೋತ್ಸವ ಕಾಂಗ್ರೆಸ್ ದುರ್ಬಲತೆಯ ಸಂಕೇತ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 13:27 IST
Last Updated 14 ಜುಲೈ 2022, 13:27 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ಕಾಂಗ್ರೆಸ್‌ ವರಿಷ್ಠ ಹಾಗೂ ಸಂಸದ ರಾಹುಲ್‌ಗಾಂಧಿ ಅವರು ‘ಸಿದ್ದರಾಮೋತ್ಸವ’ದಲ್ಲಿ ಪಾಲ್ಗೊಳ್ಳುತ್ತಿರುವುದು ಕಾಂಗ್ರೆಸ್‌ ಪಕ್ಷ ದುರ್ಬಲವಾಗಿರುವುದರ ಸಂಕೇತವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

‘ಸಿದ್ದರಾಮಯ್ಯ ಅವರ ಅಬ್ಬರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೇವಲ ರಬ್ಬರ್‌ ಸ್ಟಾಂಪ್‌ ಆಗಿ ಉಳಿದಿದ್ದಾರೆ. ಆ ಪಕ್ಷದ ಇತರ ನಾಯಕರು ಸಿದ್ದರಾಮಯ್ಯ ಅವರನ್ನು ಕಂಡರೆ ಹೆದರುತ್ತಾರೆ. ಅವರನ್ನು ವಿರೋಧಿಸಿದರೆ ತಮ್ಮ ಭವಿಷ್ಯ ಕಷ್ಟಕ್ಕೆ ಸಿಲುಕಬಹುದು ಎಂಬ ಆತಂಕಕ್ಕೆ ಸಿಲುಕಿದ್ದಾರೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿದ್ದರಾಮಯ್ಯ ಅವರದು ದೇವರಾಜ ಅರಸು ಅವರನ್ನು ಮೀರಿಸಿದ ನಾಯಕತ್ವ ಎಂದು ಶಾಸಕ ಜಿ.ಪರಮೇಶ್ವರ ಹೇಳಿದ್ದಾರೆ. ಇದು ಹಾಲು ಕುಡಿದು ಮೂತಿ ಸುಟ್ಟುಕೊಂಡ ಬೀರಬಲ್ಲನ ಬೆಕ್ಕಿನ ಕಥೆಯಂತಿದೆ. ಪರಮೇಶ್ವರ ಅವರೂ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಮೂತಿ ಸುಟ್ಟ ಬೆಕ್ಕಿನಂತೆ ಸಿದ್ದರಾಮಯ್ಯ ಅವರ ಮುಖಸ್ತುತಿಯಲ್ಲಿ ತೊಡಗಿದ್ದಾರೆ ಎಂದು ವ್ಯಂಗ್ಯವಾಡಿದರು.

ADVERTISEMENT

ಸಿದ್ದರಾಮೋತ್ಸವಕ್ಕೆ ಪ್ರತಿಯಾಗಿ ಶಿವಕುಮಾರೋತ್ಸವ ಮಾಡುವುದಾಗಿ ಹೇಳುತ್ತಿದ್ದಾರೆ. ಇಂತಹ ಉತ್ಸವಗಳನ್ನು ನಡೆಸುವುದು ಬಿಡುವುದು ಕಾಂಗ್ರೆಸ್‌ನ ಆಂತರಿಕ ವಿಚಾರ. ಆದರೆ, ರಾಜಕೀಯ ಪಕ್ಷವಾಗಿ ಈ ನಾಯಕರು ಜನರಿಗೆ ಯಾವ ಸಂದೇಶ ನೀಡುತ್ತಿದ್ದಾರೆ ಎಂದೂ ನಾರಾಯಣಸ್ವಾಮಿ ಪ್ರಶ್ನಿಸಿದರು.

ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ಸಂಪೂರ್ಣವಾಗಿ ಶರಣಾಗಿದೆ. ಹೈಕಮಾಂಡ್‌ ತನ್ನೆಲ್ಲ ಶಕ್ತಿಯನ್ನು ಕಳೆದುಕೊಂಡಿದೆ. ಕಾಂಗ್ರೆಸ್‌ ನೆಲಕಚ್ಚಿರುವುದಕ್ಕೆ ಇದು ಸ್ಪಷ್ಟ ನಿದರ್ಶನ. ಜನರ ಆಶೋತ್ತರಗಳನ್ನು ಈಡೇರಿಸಲು ಅದಕ್ಕೆ ಶಕ್ತಿ ಇಲ್ಲ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.